ಆಕಾಶದಿಂದ 'ಹಣದ ಮಳೆ'ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು...!

money-sky
Published on

ಆ ಗ್ರಾಮದಲ್ಲಿ ಆಕಾಶದಿಂದ ಬಿದ್ದದ್ದು ಅಕ್ಷರಶಃ ಹಣದ ಮಳೆಯೇ ಆಗಿತ್ತು. ಏಕೆಂದರೆ, ದೈನಂದಿನ ಖರ್ಚಿಗೆ ಪರದಾಡುತ್ತಿದ್ದ ಗ್ರಾಮಸ್ಥರೆಲ್ಲ ಬೆಳಗಾಗುವಷ್ಟರಲ್ಲಿಯೇ ಲಕ್ಷಾಧೀಶರಷ್ಟೇ ಅಲ್ಲ, ಕೋಟ್ಯಧೀಶರೇ ಆದರು...!

ಈಶಾನ್ಯ ಬ್ರೆಜಿಲ್​ ಸಾಂಟಾ ಫಿಲೋಮಿನಾದ ನಿವಾಸಿಗಳಿಗೆ ಭಾರಿ ಅಚ್ಚರಿಯೇ ಕಾದಿತ್ತು. ಆಗಸ್ಟ್​ 19ರಂದು ಗ್ರಾಮದಲ್ಲಿ ಉಲ್ಕಾಪಾತವಾಗಿ ನೂರಾರು ಸಂಖ್ಯೆಯ ಶಿಲಾ ತುಣುಕುಗಳು ಗ್ರಾಮದೆಲ್ಲೆಡೆ ಬಿದ್ದಿದ್ದವು. ಅದರಲ್ಲೂ ಕೆಲ ಶಿಲಾ ತುಣುಕುಗಳ ಬೆಲೆ 26 ಸಾವಿರ ಡಾಲರ್​ ( ಅಂದಾಜು 19 ಲಕ್ಷ ರೂ. ) ಎಂದು ಅಂದಾಜಿಸಲಾಗಿದೆ.

ವರದಿಗಳ ಪ್ರಕಾರ ಈ ಶಿಲಾ ತುಣುಕುಗಳು 460 ಕೋಟಿ ವರ್ಷಗಳಷ್ಟು ಹಿಂದಿನ ಉಲ್ಕೆಯದ್ದಾಗಿದ್ದವು. ಅಂದರೆ ಸೌರವ್ಯೂಹ ಉದಯಿಸುವುದಕ್ಕಿಂತಲೂ ಮುಂಚಿನ ಶಿಲಾ ತುಣುಕುಗಳು ಇವಾಗಿವೆ ಎಂದು ಹೇಳಲಾಗಿದೆ. ಇನ್ನೂ ವಿಶೇಷವೆಂದರೆ, ಇಂಥ ಎಲ್ಲ ಉಲ್ಕಾಪಾತಗಳ ಅಧ್ಯಯನವನ್ನು ಗಮನಿಸಿ ಹೇಳುವುದಾದರೆ, ಇಂಥವುಗಳ ಬಗ್ಗೆ ಶೇ.1ರಷ್ಟು ಮಾತ್ರ ಅಧ್ಯಯನ ನಡೆದಿದೆಯಂತೆ.

ಈ ಉಲ್ಕಾಪಾತದ ಒಂದು ಸಣ್ಣ ತುಣುಕು ಸಿಕ್ಕವರು ಕೂಡ ಶ್ರೀಮಂತರಾಗಿದ್ದಾರೆ. ಏಕೆಂದರೆ, 40 ಕೆಜಿ ತೂಕದ ಒಂದು ತುಂಡಿಗೆ 19 ಲಕ್ಷ ರೂ. ಮೌಲ್ಯ ನಿಗದಿ ಮಾಡಲಾಗಿದೆ. ಒಂದು ಗ್ರಾಂ ಶಿಲಾ ತುಂಡಿಗೆ 500 ರೂ. ಗೂ ಹೆಚ್ಚು ಬೆಲೆ ಇದೆ. ಕೆಲ ದಿನಗಳ ಹಿಂದಷ್ಟೇ ಇದರ ಅರ್ಧದಷ್ಟು ಬೆಲೆ ಇರಲಿಲ್ಲ ಎನ್ನುತ್ತಾರೆ ಇದರ ವ್ಯಾಪಾರಿಗಳು. ಈ ಗ್ರಾಮದ ಬಹುತೇಕರು ಬಡವವರು. ಸರಿಯಾದ ಕೆಲಸವೂ ಇರಲಿಲ್ಲ. ಇಲ್ಲಿ ಉದ್ಯೋಗಾವಕಾಶವೂ ಕಡಿಮೆ ಇತ್ತು. ಈ ಉಲ್ಕಾಪಾತದಿಂದ ಕೊಂಚ ಅನುಕೂಲವಾಗಿದೆ ಎಂದು ಸ್ಥಳೀಯ ಕೊಸ್ಟಾ ರಾಡ್ರಿಗಸ್​ ಹೇಳುತ್ತಾರೆ.

ಈ ಶಿಲಾತುಣುಕುಗಳು ಭೂಮಿಗಿಂತಲೂ ಮೊದಲು ಸೌರವ್ಯೂಹದಲ್ಲಿ ರೂಪುಗೊಂಡ ಖನಿಜವಾಗಿದೆ ಎಂದು ಸಾವೋಪೌಲೋ ವಿವಿ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

40 ಕೆಜಿ ಶಿಲಾ ತುಣುಕುಗಳನ್ನು ಖರೀದಿಸುವ ಬ್ರೆಜಿಲಿಯನ್​ರ ಸಂಖ್ಯೆ ಅಷ್ಟೊಂದು ಹೆಚ್ಚಾಗಿಲ್ಲ. ಹೀಗಾಗಿ ಇವನ್ನು ವಿದೇಶಿಗರು ಖರೀದಿಸುತ್ತಿದ್ದು, ಇನ್ನೂ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net