ಸುಶಾಂತ್​ ಮರಣೋತ್ತರ ಪರೀಕ್ಷೆ ವೇಳೆ ರಿಯಾ ಹಾಜರಿ; ಆಸ್ಪತ್ರೆಯ ನಡೆ ಖಂಡಿಸಿ ನೋಟಿಸ್ ಜಾರಿ

suahnt_rhea
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಬಿಐಗೆ ಪ್ರಕರಣ ಕೈವಶವಾದ ಬಳಿಕವಂತೂ ಹೊಸ ವಿಚಾರಗಳು ಹೊರ ಬರುತ್ತಿವೆ. ಇದೀಗ ಮರಣೋತ್ತರ ಪರೀಕ್ಷೆ ನಡೆಸಿದ ಆಸ್ಪತ್ರೆಯ ನಡೆ ಖಂಡಿಸಿ ನೋಟಿಸ್​ ಜಾರಿ ಮಾಡಲಾಗಿದೆ.

ಸುಶಾಂತ್​ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕೂಪರ್​ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅಚ್ಚರಿ ಏನೆಂದರೆ, ಆಗ ರಿಯಾ ಚಕ್ರವರ್ತಿಗೂ ಆಸ್ಪತ್ರೆಯಲ್ಲಿ ಪ್ರವೇಶ ನೀಡಲಾಗಿತ್ತು. ಆಸ್ಪತ್ರೆಯ ಈ ನಡೆಯನ್ನು ಖಂಡಿಸಿದ ಮಹಾರಾಷ್ಟ್ರದ ಮಾನವ ಹಕ್ಕುಗಳ ಆಯೋಗ, ನೋಟಿಸ್ ಜಾರಿ ಮಾಡಿದೆ.

ಆಸ್ಪತ್ರೆಯ ಡೀನ್​ ಆಗಿರುವ ಪಿನಾಕಿನ್​ ಗುಜ್ಜರ್​ಗೆ ಕಾರಣಕೇಳಿ ನೋಟಿಸ್​ ನೀಡಲಾಗಿದ್ದು, ಸೆಪ್ಟಂಬರ್​ 7ರ ವಳಗೆ ಸಂಪೂರ್ಣ ವರದಿ ನೀಡುವಂತೆ ನೋಟಿಸ್​ನಲ್ಲಿ ನಮೂದಿಸಿದೆ. ಆದರೆ, ರಿಯಾ ಅವರ ಆಗಮನವನ್ನು ಡೀನ್​ ಗುಜ್ಜರ್​ ತಳ್ಳಿಹಾಕಿದ್ದಾರೆ.

ಈಗಾಗಲೇ ಸುಶಾಂತ್​ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಈ ನಡುವೆ ಸುಶಾಂತ್​ ಶವಪರೀಕ್ಷೆ ವೇಳೆ ರಿಯಾಗೆ ಆಸ್ಪತ್ರೆಯೊಳಕ್ಕೆ ಪ್ರವೇಶ ನೀಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದ್ದು, ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net