

ಹುಬ್ಬಳ್ಳಿ: ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಅಸಹ್ಯಕರ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ ಕಿರಾತಕರು, ಇದೀಗ ಬಿಜೆಪಿ ನಾಯಕರಾದ ಮೋದಿ, ಯೋಗಿ ಆದಿತ್ಯನಾಥ್ ಮುಂತಾದವರು ಟಿಪ್ಪುವಿಗೆ ತಲೆ ಬಾಗುತ್ತಿರುವಂತೆ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಬೆನ್ನೆಲ್ಲೇ ಮತ್ತೊಂದು ವಿಡಿಯೋವನ್ನು ಕಿರಾತಕರು ವೈರಲ್ ಮಾಡಿದ್ದು ಇದು ಪ್ರಚೋದನಕಾರಿ ವಿಡಿಯೋ ಆಗಿದೆ.
ಇವರ ವಿರುದ್ಧ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಬಳಸಿಕೊಂಡು ಅಸಹ್ಯಕರ ವಿಡಿಯೊ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ಪ್ರಕರಣ ದಾಖಲಾಗಿದೆ. ಆದರೂ ಇದೀಗ ಪ್ರಚೋದನಾಕಾರಿ ವಿಡಿಯೋಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು 8 ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಈ ವಿಡಿಯೋಗಳ ತುಣಕುಗಳನ್ನು ಪರಿಶೀಲನೆಗೆಂದು ಸೈಬರ್ ಪ್ರಯೋಗಾಲಯಕ್ಕೂ ಪೊಲೀಸರು ಕಳಿಸಿದ್ದಾರೆ.
ಇದೆಲ್ಲದರ ಮಧ್ಯೆಯೂ ಈ ಕಿರಾತಕರು, ತಾಕತ್ತಿದ್ದರೆ ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೇ ಇವರು, ಭಾರತೀಯ ನೋಟುಗಳ ಮೇಲಿನ ಮಹಾತ್ಮಾ ಗಾಂಧಿ ಫೋಟೊವನ್ನು ಎಡಿಟ್ ಮಾಡಿ ತೆಗೆದು, ಟಿಪ್ಪುವಿನ ಭಾವಚಿತ್ರ ಹಾಕಿ ಎಡಿಟ್ ಮಾಡಿದ್ದಾರೆ. ಆರೋಪಿ ಉದ್ದೇಶ ಏನು ಎನ್ನುವುದು ಇನ್ನೂ ಬಯಲಾಗದೇ ಇದ್ದು ಇದು ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದೆ.