

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ಕೊನೆಗೆ ನೆರವಿಗೆ ಬಂದಿರುವುದು ನಿಷೇಧಿತ ಇಲಿ-ಕುಳಿ ಗಣಿಗಾರಿಕೆ (ರ್ಯಾಟ್ ಹೋಲ್ ಮೈನಿಂಗ್ Rat-Hole Mining).
ಇಲಿ-ಕುಳಿ ಗಣಿಗಾರಿಕೆ ಕಾನೂನುಬಾಹಿರವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2014ರಲ್ಲಿಯೇ ಇಲಿ-ಕುಳಿ ಗಣಿಗಾರಿಕೆಯನ್ನು ಅವೈಜ್ಞಾನಿಕ ಮತ್ತು ಅಸುರಕ್ಷಿತವೆಂದು ನಿಷೇಧಿಸಿತು, ಆದರೆ, ಈ ಅಭ್ಯಾಸವು ಮೇಘಾಲಯ ಸೇರಿ ಈಶಾನ್ಯ ರಾಜ್ಯಗಳಲ್ಲಿ ಈಗಲೂ ಮುಂದುವರಿದಿದೆ.
ಹೈಟೆಕ್ ಮತ್ತು ಆಮದು ಮಾಡಿದ ಯಂತ್ರಗಳು ಕೆಟ್ಟುಹೋದ ನಂತರ ಅಂತಿಮವಾಗಿ ಉತ್ತರಾಖಂಡದ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸಲು ನೆರವಿಗೆ ಬಂದಿರುವುದು ಈ ನಿಷೇಧಿತ ಗಣಿಗಾರಿಕೆಯೇ.
ಸವಾಲಿನ ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ 25 ಟನ್ ಅಗರ್ ಯಂತ್ರ ವಿಫಲವಾದ ನಂತರ ಇಲಿ-ಕುಳಿ ಗಣಿಗಾರಿಕೆಯನ್ನು ಸೋಮವಾರ ಪ್ರಾರಂಭಿಸಲಾಯಿತು. ಹಸ್ತಚಾಲಿತ ಕೊರೆಯುವಿಕೆಯ ಈ ವಿಧಾನವು ತ್ವರಿತ ಪ್ರಗತಿ ಕೂಡ ಸಾಧಿಸಿತು.
ಇಲಿ-ಕುಳಿ ಗಣಿಗಾರಿಕೆಯು ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನವಾಗಿದೆ. 4 ಅಡಿಗಿಂತ ಹೆಚ್ಚು ಅಗಲವಿಲ್ಲದ ಅತ್ಯಂತ ಚಿಕ್ಕ ಹೊಂಡಗಳನ್ನು ಅಗೆಯಲು ಈ ವಿಧಾನ ಬಳಸಲಾಗುತ್ತದೆ. ಗಣಿಗಾರರು ಕಲ್ಲಿದ್ದಲು ನಿಕ್ಷೇಪ ಕಾಣಿಸಿಕೊಂಡ ನಂತರ, ಕಲ್ಲಿದ್ದಲನ್ನು ಹೊರತೆಗೆಯಲು ಅದರ ಪಕ್ಕಕ್ಕೆ ಸುರಂಗಗಳನ್ನು ಮಾಡಲಾಗುತ್ತದೆ. ಹೊರತೆಗೆಯಲಾದ ಕಲ್ಲಿದ್ದಲನ್ನು ಸಮೀಪದಲ್ಲಿ ಸುರಿಯಲಾಗುತ್ತದೆ. ನಂತರ ಹೆದ್ದಾರಿಗಳ ಮೂಲಕ ಸಾಗಿಸಲಾಗುತ್ತದೆ. ಇಲಿ-ಕುಳಿ ಗಣಿಗಾರಿಕೆಯಲ್ಲಿ ಕಾರ್ಮಿಕರು ಗಣಿಗಳನ್ನು ಪ್ರವೇಶಿಸಿ, ಅಗೆಯಲು ಕೈಯಲ್ಲಿ ಹಿಡಿಯುವ ಸಾಧನಗಳನ್ನು ಬಳಸುತ್ತಾರೆ. ಇಂತಹ ಗಣಿಗಾರಿಕೆಯು ಮೇಘಾಲಯದಲ್ಲಿ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಇಲ್ಲಿ ಕಲ್ಲಿದ್ದಲು ನಿಕ್ಷೇಪ ತುಂಬಾ ತೆಳುವಾಗಿರುತ್ತದೆ ಹಾಗೂ ಇತರ ಯಾವುದೇ ವಿಧಾನವು ಆರ್ಥಿಕವಾಗಿ ಲಾಭದಾಯಕವಾಗಿರುವುದಿಲ್ಲ.
ಈ ಗಣಿಗಾರಿಕೆಯಲ್ಲಿ ಸಣ್ಣ ಗಾತ್ರದ ಸುರಂಗಗಳು ಇರುವ ಕಾರಣ ಈ ಅಪಾಯಕಾರಿ ಕೆಲಸಕ್ಕೆ ಮಕ್ಕಳು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಜೀವನೋಪಾಯಕ್ಕಾಗಿ ಸೀಮಿತ ಆಯ್ಕೆಗಳನ್ನು ಹೊಂದಿರುವ ಮೇಘಾಲಯ ರಾಜ್ಯದಲ್ಲಿ, ಅನೇಕರು ಇಂತಹ ಅಪಾಯಕಾರಿ ಕೆಲಸಕ್ಕೆ ಮುಂದಾಗುತ್ತಾರೆ. ಇಂತಹ ಗಣಿಗಳಲ್ಲಿ ಕೆಲಸ ಪಡೆಯಲು ಅನೇಕ ಮಕ್ಕಳು ವಯಸ್ಕರಂತೆ ಪೋಸ್ ಕೂಡ ನೀಡುತ್ತಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2014ರಲ್ಲಿ ಇಲಿ-ರಂಧ್ರ ಗಣಿಗಾರಿಕೆಯನ್ನು ಅವೈಜ್ಞಾನಿಕ ಎಂದು ನಿಷೇಧಿಸಿದೆ. ಆದರೂ ಈ ವಿಧಾನದ ಗಣಿಗಾರಿಕೆ ಮುಂದುವರಿದಿದೆ. ಇಂತಹ ಗಣಿಗಾರಿಕೆಯಿಂದಾಗಿ ಈಶಾನ್ಯ ರಾಜ್ಯದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. 2018ರಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 15 ಪುರುಷರು ಪ್ರವಾಹಕ್ಕೆ ಒಳಗಾದ ಗಣಿಯಲ್ಲಿ ಸಿಕ್ಕಿಬಿದ್ದರು. ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. 2021ರಲ್ಲಿ ಐವರು ಗಣಿಗಾರರು ಪ್ರವಾಹಕ್ಕೆ ಸಿಲುಕಿದ ಗಣಿಯಲ್ಲಿ ಸಿಕ್ಕಿಹಾಕಿಕೊಂಡರು. ಒಂದು ತಿಂಗಳ ನಂತರ ರಕ್ಷಣಾ ತಂಡಗಳು ಕಾರ್ಯಾಚರಣೆ ಹಿಂತೆಗೆದುಕೊಳ್ಳುವ ಮೊದಲು ಮೂರು ಶವಗಳು ಪತ್ತೆಯಾದವು.
ಆದರೆ, ಗಣಿಗಾರಿಕೆಯು ಮೇಘಾಲಯ ರಾಜ್ಯ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿದೆ. ಇದಲ್ಲದೆ, ಮಣಿಪುರ ಸರ್ಕಾರವು ನಿಷೇಧವನ್ನು ಪ್ರಶ್ನಿಸಿದೆ, ಈ ಪ್ರದೇಶಕ್ಕೆ ಬೇರೆ ಯಾವುದೇ ಕಾರ್ಯಸಾಧ್ಯವಾದ ಗಣಿಗಾರಿಕೆ ಆಯ್ಕೆಗಳಿಲ್ಲ ಎಂಬ ವಾದವನ್ನು ಅದು ಮುಂದಿಟ್ಟಿದೆ. 2022ರಲ್ಲಿ ಮೇಘಾಲಯ ಹೈಕೋರ್ಟ್ ನೇಮಿಸಿದ ಸಮಿತಿಯು ಮೇಘಾಲಯದಲ್ಲಿ ಇಲಿ-ಕುಳಿ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದೆ ಎಂದು ಹೇಳಿದೆ.
ಅಮೆರಿಕದ ಆಗರ್ ಯಂತ್ರವು ವಿಫಲವಾದ ನಂತರ ಈ ಕಾನೂನುಬಾಹಿರ ಗಣಿಗಾರಿಕೆ ಅಭ್ಯಾಸವು ಈಗ ಕಾರ್ಮಿಕರ ರಕ್ಷಣೆಗೆ ಬಂದಿದೆ. ಈ ಕಾರ್ಯಕ್ಕಾಗಿ ಎರಡು ತಜ್ಞರ ತಂಡಗಳು, ಒಟ್ಟು 12 ಮಂದಿಯನ್ನು ದೆಹಲಿಯಿಂದ ವಿಮಾನದಲ್ಲಿ ಕರೆತರಲಾಯಿತು. ಉತ್ತರಾಖಂಡ ಸರ್ಕಾರದ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ಅವರು, ಇಲ್ಲಿ ಬಂದವರು ಇಲಿ-ಕುಳಿ ಗಣಿಗಾರರಲ್ಲ; ಈ ತಂತ್ರದಲ್ಲಿ ಪರಿಣಿತರು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಒಬ್ಬ ವ್ಯಕ್ತಿಯು ಕೊರೆಯುತ್ತಾನೆ, ಇನ್ನೊಬ್ಬನು ಅವಶೇಷಗಳನ್ನು (ಕೊರೆದ ಕಲ್ಲು, ಮಣ್ಣು) ಸಂಗ್ರಹಿಸುತ್ತಾನೆ. ಮೂರನೆಯವನು ಅದನ್ನು ಹೊರತೆಗೆಯಲು ಟ್ರಾಲಿಯಲ್ಲಿ ಇರಿಸುತ್ತಾನೆ ಇಲಿ-ಕುಳಿ ಗಣಿಗಾರಿಕೆ ತಜ್ಞ ರಜಪೂತ್ ರಾಯ್ ಹೇಳುತ್ತಾರೆ. ಈ ರೀತಿಯಲ್ಲಿ ಸಿಲ್ಕ್ಯಾರಾ ಸುರಂಗದಲ್ಲಿ ರಕ್ಷಣೆ ಕೆಲಸ ಇಲಿ-ಕುಳಿ ಗಣಿಗಾರಿಕೆ ಮೂಲಕ ನಡೆದಿದೆ.