

ಬೆಂಗಳೂರು: ಆರ್ಥಿಕ ಸಮಸ್ಯೆಯಿಂದಾಗಿ ರಾಜ್ಯ ಸರ್ಕಾರವೇ ಸಾಲ ಪಡೆಯುವ ಸ್ಥಿತಿಯಲ್ಲಿರುವಾಗ, ಕರೊನಾದಿಂದ ಗುಣವಾಗಿರುವ ಕೆಲವು ಶಾಸಕರು ತಮ್ಮ ಆಸ್ಪತ್ರೆ ಬಿಲ್ಗಳನ್ನು ಸರ್ಕಾರದಿಂದ ಪಡೆಯಲು ಮುಂದಾಗಿದ್ದಾರೆ! ತಮ್ಮದು ಮಾತ್ರವಲ್ಲದೆ, ತಮ್ಮ ಕುಟುಂಬದವರ ಆಸ್ಪತ್ರೆ ಬಿಲ್ಗಳನ್ನೂ ಸರ್ಕಾರಕ್ಕೆ ಸಲ್ಲಿಸಿ, ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಬಿಲ್ ಕೂಡ ಕಡಿಮೆಯೇನಿಲ್ಲ. ಪ್ರತಿಯೊಬ್ಬರದೂ ಹಲವು ಲಕ್ಷ ರೂ. ಲೆಕ್ಕದಲ್ಲೇ ಇದೆ. ಇದರಲ್ಲಿ ಎಲ್ಲ ಪಕ್ಷದ ಶಾಸಕರೂ ಇದ್ದಾರೆ. ಯಾರ್ಯಾರು ಎಷ್ಟೆಷ್ಟು ಬಿಲ್ ಸಲ್ಲಿಸಿದ್ದಾರೆ ಅಂತ ಒಮ್ಮೆ ನೋಡೋಣ.
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಒಟ್ಟು 8.55 ಲಕ್ಷ ರೂ. ಬಿಲ್ ಸಲ್ಲಿಸಿದ್ದಾರೆ. ಅದರಲ್ಲಿ ಅವರದು 1.92 ಲಕ್ಷ ರೂ. ಇದ್ದರೆ, ಉಳಿದದ್ದು ಅವರ ಪತ್ನಿ, ಪುತ್ರಿಯರು, ತಂದೆ-ತಾಯಿ ಚಿಕಿತ್ಸಾ ವೆಚ್ಚ. ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ 3 ಲಕ್ಷದ ಬಿಲ್ ಸಲ್ಲಿಸಿದ್ದು, ಅದರಲ್ಲಿ ಅವರದು ಮತ್ತು ಪತ್ನಿಯದು ತಲಾ ಒಂದೂವರೆ ಲಕ್ಷ. ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವರ್ 5.11 ಲಕ್ಷದ ಬಿಲ್ ಸಲ್ಲಿಸಿದ್ದು, ಅದರಲ್ಲಿ ಅವರದು 3 ಲಕ್ಷ, ಪತ್ನಿಯದು 2.12 ಲಕ್ಷ ಇದೆ. ಗುರುಮಿಟಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ 5.52 ಲಕ್ಷದ ಬಿಲ್ ಸಲ್ಲಿಸಿದ್ದು ಅದರಲ್ಲಿ ಅವರದು 3.29 ಲಕ್ಷ, ಪತ್ನಿಯದು 2.22 ಲಕ್ಷ ಇದೆ. ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ 2.36 ಲಕ್ಷ ರೂ. ಬಿಲ್ ಸಲ್ಲಿಸಿದ್ದು, ಅದರಲ್ಲಿ ಸ್ವಂತದ್ದು 1 ಲಕ್ಷ, ಪುತ್ರ ಮತ್ತು ಪುತ್ರಿಯದು ಸುಮಾರು ಒಂದೂವರೆ ಲಕ್ಷ ಇದೆ.
ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ 2.29 ಲಕ್ಷ; ಕಲಘಟಗಿ ಬಿಜೆಪಿ ಶಾಸಕ ಸಿಎಂ ನಿಂಬಣ್ಣನವರ್ 2.91 ಲಕ್ಷ; ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ 1.07 ಲಕ್ಷ; ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ಪತ್ನಿಯದು 2.24 ಲಕ್ಷ; ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ 2.29 ಲಕ್ಷ ಬಿಲ್ ಸಲ್ಲಿಕೆಯಾಗಿದೆ.
ನಿಯಮ ಏನು ಹೇಳುತ್ತೆ?: ಶಾಸಕರು ಮತ್ತು ಅವರ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲು ನಿಯಮಗಳಲ್ಲಿ ಅವಕಾಶವಿದೆ. ಆದರೆ ಕರೊನಾಕ್ಕೆ ಸಂಬಂಧಿಸಿದಂತೆ ಬೇರೆ ನಿಯಮಗಳಿವೆ. ಸೋಂಕಿಗೆ ತುತ್ತಾದ ವ್ಯಕ್ತಿ ಮೊದಲು ಸರ್ಕಾರಿ ವ್ಯವಸ್ಥೆಯ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಸರ್ಕಾರದವರು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದರೆ ಮಾತ್ರ ಅಲ್ಲಿ ದಾಖಲಾಗಬೇಕು. ಆಗ ಸರ್ಕಾರವೇ ಅದರ ವೆಚ್ಚವನ್ನು ಭರಿಸುತ್ತದೆ. ವ್ಯಕ್ತಿಯೇ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಆ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಈಗ ಸರ್ಕಾರ ಈ ನಿಯಮವನ್ನು ಪಾಲಿಸುತ್ತದೆಯೇ ಅಥವಾ ಉಲ್ಲಂಘಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.