More

    ನವೆಂಬರ್ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ? ಇಲ್ಲಿದೆ ಸರ್ಕಾರದ ನಿಲುವು

    | ಸೋರಲಮಾವು ಶ್ರೀಹರ್ಷ, ತುಮಕೂರು
    ಮೀಸಲಾತಿ ಪ್ರಕಟವಾಗಿರುವ ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಮತ್ತಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

    ನವೆಂಬರ್ ಅಂತ್ಯಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆಯಾದರೂ ರಾಜಕೀಯ ಪಕ್ಷಗಳಿಗೆ ಚುನಾವಣೆ ನಡೆಸಲು ಉತ್ಸಾಹವಿಲ್ಲ ಎನ್ನಲಾಗಿದೆ.

    ಚುನಾವಣಾ ಆಯೋಗ ನ್ಯಾಯಾಲಯಕ್ಕೆ ನವೆಂಬರ್ ಅಂತ್ಯಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದರೂ ಸರ್ಕಾರ ಚುನಾವಣೆ ಮುಂದೂಡಲು ಮನವಿ ಮಾಡಿದೆ ಎನ್ನಲಾಗಿದೆ.

    ಪಟ್ಟಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು 2 ವರ್ಷದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಸ್ಥಳೀಯ ನಾಯಕತ್ವಕ್ಕೆ ತಡವಾಗಿ ಅವಕಾಶವಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿಯೂ ಚುನಾವಣೆ ನಡೆದರೆ ಸ್ಥಳೀಯ ನಾಯಕತ್ವಕ್ಕೆ ಚುನಾವಣೆ ವೇದಿಕೆಯಾಗಲಿದೆ.

    ಚುನಾವಣೆ ಮುಂದೂಡಲು ಸರ್ಕಾರ ಮನವಿ: ರಾಜ್ಯದೆಲ್ಲೆಡೆ ಕರೊನಾ ಗಂಭೀರತೆ ಪರಿಗಣಿಸಿ ಗ್ರಾಪಂ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅ.3ರಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಅವಧಿ ಪೂರ್ಣಗೊಂಡಿರುವ ರಾಜ್ಯದ ಎಲ್ಲ ಗ್ರಾಪಂಗಳಿಗೆ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ನೇತೃತ್ವದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ತಮ್ಮ ಪ್ರಮಾಣಪತ್ರ ಸಲ್ಲಿಸಿವೆ.

    ಚುನಾವಣಾ ಆಯೋಗ ನವೆಂಬರ್ ಅಂತ್ಯದಲ್ಲಿ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ ಎನ್ನಲಾಗಿದ್ದು, ರಾಜ್ಯ ಸರ್ಕಾರ ಮಾತ್ರ ಚುನಾವಣೆ ಮುಂದೂಡಲು ಮನವಿ ಮಾಡಿರುವುದರಿಂದ ಗ್ರಾಮಾಯಣ ಮತ್ತಷ್ಟು ದಿನ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ.

    ಕರೊನಾ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಕಳೆದ ಜೂನ್ ತಿಂಗಳಿನಲ್ಲಿಯೂ ರಾಜ್ಯ ಸರ್ಕಾರ ಪ್ರಮಾಣ ಸಲ್ಲಿಸಿ ಕೋರಿತ್ತು, ಜೂನ್ ತಿಂಗಳಿಗೆ ಹೋಲಿಸಿದರೆ ಈಗ ಕರ್ನಾಟಕದಲ್ಲಿ ಕರೊನಾ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಈ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಷ್ಟ ಎಂದು ಮನವಿ ಸಲ್ಲಿಸಿದೆ ಎನ್ನಲಾಗಿದೆ.

    ವಿಧಾನಸಭೆ, ಪರಿಷತ್ ಸೀಮಿತ ಪ್ರದೇಶ: ರಾಜ್ಯದ 2 ವಿಧಾನಸಭೆ ಉಪಚುನಾವಣೆ ಹಾಗೂ 4 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚಟುವಟಿಕೆ ನಡೆಯುತ್ತಿದ್ದರೂ ಅದು ಸೀಮಿತ ಪ್ರದೇಶ ಹಾಗೂ ಮತದಾರರನ್ನು ಒಳಗೊಂಡಿದೆ. ಗ್ರಾಪಂ ಚುನಾವಣೆ ಇಡೀ ರಾಜ್ಯದ ಗ್ರಾಮೀಣ ಭಾಗದಲ್ಲಿ ನಡೆಯುವುದರಿಂದ ದೈಹಿಕ ಅಂತರ ಮುಂತಾದ ಮುಂಜಾಗ್ರತಾ ಕ್ರಮವನ್ನು ಪ್ರಚಾರದ ವೇಳೆಯಲ್ಲಿ ಜಾರಿಗೊಳಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕು ಎಂದು ಸರ್ಕಾರ ಮನವಿ ಮಾಡಿದೆ.

    ಅಧಿಕಾರಿಗಳು, ಸಿಬ್ಬಂದಿ ಹಾಗೂ ವಾಹನಗಳು ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು ಚುನಾವಣೆ ನಡೆದರೆ ಕರೊನಾ ನಿರ್ವಹಣೆ ಬಲಹೀನವಾಗುವ ಸಾಧ್ಯತೆಯಿದೆ ಎಂಬ ಕಾರಣದ ಜತೆಗೆ ಕೇರಳದಲ್ಲಿ ಸರ್ವಪಕ್ಷಗಳು ಹಾಗೂ ಭಾರತೀಯ ವೈದ್ಯಕೀಯ ಸಂಘ ಚುನಾವಣೆ ಮುಂದೂಡುವಂತೆ ಮಾಡಿರುವ ಒತ್ತಾಯವನ್ನು ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿ ಚುನಾವಣೆ ಮುಂದೂಡಲು ಮನವಿ ಮಾಡಿದೆ ಎನ್ನಲಾಗಿದೆ.

    ಯುವ ರಾಜಕಾರಣದಲ್ಲಿ ಕನ್ನಡಿಗರ ಖದರ್! ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದವರದ್ದೇ ಮೇಲುಗೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts