

ಹಾಂಗ್ಕಾಂಗ್: ಜನಪ್ರಿಯ ಹಾಂಗ್ಕಾಂಗ್ ನಟಿಯೊಬ್ಬರು ಕುಟುಂಬಸ್ಥರೊಂದಿಗೆ ಕ್ರಿಸ್ಮಸ್ ಆಚರಿಸಿದ ಮಾರನೇ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಲೈ ಸುಕ್ ಯಿನ್ ಎಂದು ಗುರುತಿಸಲಾಗಿದ್ದು, ಇವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ನಟಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರರಿಯಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ ಅವರನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 26ರಂದು ಲೈ ಸುಕ್ ಯಿನ್ ತನ್ನ ಕುಟುಂಬಸ್ಥರೊಂದಿಗೆ ಕ್ರಿಸ್ಮಸ್ ಆಚರಿಸಿದ್ದರು. ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಮಾರನೇ ದಿನವೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಲೈ ಸುಕ್ ಯಿನ್ ಅವರು 1995 ರಲ್ಲಿ ನಡೆದ ಮಿಸ್ ಏಷ್ಯಾ ಸ್ಫರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ವ್ಯಾಂಪೈರ್ ಎಕ್ಸ್‌ಪರ್ಟ್, ಯಂಗ್ ಅಂಡ್ ಡೇಂಜರಸ್ 3 ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. 1998ರಲ್ಲಿ ನಟ ಲೋರನ್ನು ಮದುವೆಯಾದ ಇವರು 2007ರಲ್ಲಿ ಅವರಿಗೆ ವಿಚ್ಛೇದನ ನೀಡಿ ವೈದ್ಯ ಆ್ಯಂಗಸ್ ಹುಯಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.