'ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ' ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

amit-2
Published on

ನವದೆಹಲಿ: 'ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ' ಹೆಸರಿನ ಸಂಘಟನೆಯನ್ನು ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ 'ಕಾನೂನುಬಾಹಿರ ಸಂಘ' ಎಂದು ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಈ ವಿಷಯ ತಿಳಿಸಿದ್ದಾರೆ.

ಈ ಹಿಂದೆ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನೇತೃತ್ವದ ಆಲ್ ಇಂಡಿಯಾ ಹುರಿಯತ್ ಕಾನ್ಫರೆನ್ಸ್‌ನ ಹಂಗಾಮಿ ಬಣದ ಹಂಗಾಮಿ ಅಧ್ಯಕ್ಷ ಮಸರತ್ ಆಲಂ ಈ ಸಂಘಟನೆಯ ನೇತೃತ್ವ ವಹಿಸಿದ್ದಾನೆ.

"ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಹಾಗೂ ಈ ಪ್ರದೇಶದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುವ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಅಮಿತ್ ಶಾ ಅವರು ಎಕ್ಸ್‌ ಸೋಷಿಯ್​ ಮೀಡಿಯಾ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಭಾರತದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ವರ್ತಿಸುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. "ನಮ್ಮ ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಯಾರೇ ಆಗಲಿ ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಸಂದೇಶವು ಜೋರಾಗಿ ಮತ್ತು ಸ್ಪಷ್ಟವಾಗಿದೆ" ಎಂದು ಗೃಹ ಸಚಿವರು ಹೇಳಿದ್ಧಾರೆ.

ಈ ಸಂಘಟನೆಯು "ಭಾರತ ವಿರೋಧಿ ಮತ್ತು ಪಾಕಿಸ್ತಾನದ ಪರ ಪ್ರಚಾರಕ್ಕೆ" ಹೆಸರುವಾಸಿಯಾಗಿದೆ ಎಂದು ಗೃಹ ಸಚಿವಾಲಯದ ಅಧಿಸೂಚನೆಯು ಹೇಳಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ "ಪಾಕಿಸ್ತಾನ ಮತ್ತು ಅದರ ಪರೋಕ್ಷ ಸಂಸ್ಥೆಗಳು ಸೇರಿದಂತೆ" ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸುವಲ್ಲಿ ಈ ಸಂಘಟನೆಯ ನಾಯಕರು ತೊಡಗಿಸಿಕೊಂಡಿದ್ದಾರೆ ಎಂದೂ ಅದು ಹೇಳಿದೆ.

ಸಂಘಟನೆಯ ಸದಸ್ಯರು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ಲದೆ, ದೇಶದ ಸಾಂವಿಧಾನಿಕ ಅಧಿಕಾರದ ಕಡೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತಿದ್ದಾರೆ ಎಂದು ಅಧಿಸೂಚನೆ ಹೇಳಿದೆ.

ಸಂಘಟನೆಯ ಮುಖಂಡರು, ವಿಶೇಷವಾಗಿ ಅದರ ಅಧ್ಯಕ್ಷ ಮಸರತ್ ಆಲಂ, ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net