

ಅಮೃತಸರ: ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸಿನಲ್ಲಿ ದೂರದ ದೇಶಕ್ಕೆ ಕಠಿಣ ಮಾರ್ಗದಲ್ಲಿ ತೆರಳಿದ್ದ ಭಾರತೀಯರು ಛಿದ್ರ ಕನಸಿನೊಂದಿಗೆ ಮತ್ತೆ ತಾಯ್ನಾಡಿಗೆ ಬಂದಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾಲನೆ ನೀಡಿದ್ದು, ಗಡಿಪಾರಾದ 104 ಭಾರತೀಯರು ಪಂಜಾಬ್ಗೆ ಬಂದಿಳಿದಿದ್ದಾರೆ.
ಅಮೆರಿಕದ ಟೆಕ್ಸಾಸ್ನ ಸ್ಯಾನ್ ಆಂಟೋನಿಯೋದಿಂದ 104 ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ವಾಯುಪಡೆಯ ಸಿ-17 ವಿಮಾನ ಪಂಜಾಬ್ನ ಅಮೃತಸರದ ಶ್ರೀ ಗುರು ರಾಮದಾಸ್ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮ. 1.55 ಕ್ಕೆ ಬಂದಿಳಿದಿದೆ. ಈ ಮೊದಲು 205 ಭಾರತೀಯರನ್ನು ಗಡಿಪಾರು ಮಾಡಿ ಕರೆತರಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಅಮೆರಿಕದಿಂದ ಗಡಿಪಾರಾದವರ ಮೊದಲ ಬ್ಯಾಚ್ ಅನ್ನು ಕರೆತಂದ ವಿಮಾನದಲ್ಲಿ ಪಂಜಾಬ್ನ 30, ಹರಿಯಾಣದ 33, ಗುಜರಾತ್ನ 33, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ 3 ಹಾಗೂ ಚಂಡೀಗಢದ ಇಬ್ಬರು ಸೇರಿ ಒಟ್ಟು 104 ಭಾರತೀಯರು ವಾಪಸ್ ಬಂದಿದ್ದಾರೆ. ಇವರಲ್ಲಿ ಬಹುತೇಕರು ಡಾಂಕಿ ಮಾರ್ಗ ದಿಂದ ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದರೆ, ಕೆಲವರು ವೀಸಾ ಅವಧಿ ಮುಗಿದ ಬಳಿಕ ಅಕ್ರಮವಾಗಿ ನೆಲೆಸಿದ್ದರು. ಅಮೆರಿಕದಿಂದ ಗಡಿಪಾರಾಗಿ ಬಂದಿರುವ ಪಂಜಾಬಿನ ವಲಸಿಗರಲ್ಲಿ ಹೆಚ್ಚಿನವರು ಗುರುದಾಸ್ಪುರ, ಅಮೃತಸರ, ತರನ್ ತರನ್, ಜಲಂಧರ್, ನವನ್ಶಹರ್, ಪಟಿಯಾಲಾ, ಮೊಹಾಲಿ ಮತ್ತು ಸಂಗರೂರ್ ಪ್ರದೇಶಕ್ಕೆ ಸೇರಿದವರು.
ನರೇಂದ್ರ ಮೋದಿ- ಟ್ರಂಪ್ ಚರ್ಚೆ ಬಳಿಕ ಪ್ರಕ್ರಿಯೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ನೀತಿ ಕುರಿತು ಚರ್ಚೆ ನಡೆಸಿದ ಬಳಿಕ ಭಾರತದ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಹ ಅಕ್ರಮ ವಲಸಿಗರ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದರು.
4 ವರ್ಷದ ಮಗುವನ್ನೂ ಕಳುಹಿಸಿದರು: ಅಮೆರಿಕದಿಂದ ಗಡಿಪಾರಾದ 104 ಜನರಲ್ಲಿ 19 ಮಹಿಳೆಯರಿದ್ದರೆ, 13 ಅಪ್ತಾಪ್ತರಿದ್ದಾರೆ. 4 ವರ್ಷದ ಮಗುವನ್ನೂ ಗಡಿಪಾರು ಮಾಡಲಾಗಿದೆ. ಇನ್ನು ಗಡಿಪಾರಾದವರಲ್ಲಿ 48 ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ವಿಮಾನದಲ್ಲಿ 11 ಸಿಬ್ಬಂದಿ ಮತ್ತು ಗಡಿಪಾರು ಪ್ರಕ್ರಿಯೆ ಪೂರ್ಣಗೊಳಿಸಲು 45 ಅಧಿಕಾರಿಗಳೂ ಇದ್ದರು.
ಕೋಳ ತೊಡಿಸಿ ಕರೆತಂದರು: ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದ ಭಾರತೀಯರಿಗೆ ಕೈ ಹಾಗೂ ಕಾಲುಗಳಿಗೆ ಕೋಳ ತೊಡಿಸಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಭಾರತೀಯರ ಕೈಗಳಿಗೆ ಕೋಳ ತೊಡಿಸಲಾಗಿತ್ತು ಮತ್ತು ಅವರಿಗೆ ಅವಮಾನ ಮಾಡಲಾಗಿದೆ. ಇದನ್ನು ನೋಡಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದೇಕೆ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕ ಗೌರವ್ ಗೊಗೋಯ್ ಪ್ರಶ್ನಿಸಿದ್ದಾರೆ.