ಮುಂಬೈನಲ್ಲಿ ಭಾರೀ ಗಾಳಿಗೆ ಅಕ್ರಮ ಜಾಹಿರಾತು ಫಲಕ ಕುಸಿತ! 14 ಸಾವು, 74 ಜನರು ಗಂಭೀರ

WhatsApp Image 2024-05-14 at 9.23.13 AM
Published on

ಮುಂಬೈ: ವಾಣಿಜ್ಯ ನಗರ, ಮಹಾನಗರಿ ಮುಂಬೈನಲ್ಲಿ ಧೂಳು ಸಹಿತ ಭಾರೀ ಬಿರುಗಾಳಿ ಬೀಸಿದ್ದು, ಜನಜೀವನ ತತ್ತರಿಸಿ ಹೋಗಿದೆ. ನಿನ್ನೆ (ಮೇ.13) ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಇಂದಿನ ವರದಿ ಪ್ರಕಾರ, ಭೀಕರ ಘಟನೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದು, 74 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅಕ್ರಮ ಫಲಕದ ವಿರುದ್ಧ ಇದೀಗ ಮುಂಬೈ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ.

ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮುಂಬೈ ಮಹಾನಗರದಲ್ಲಿ ಕಾರ್ಮೋಡ ಆವರಿಸಿದ್ದು, ಮುಂಬೈ ನಗರದ ದಾದರ್, ಕುರ್ಲಾ, ಮಾಹಿಮ್, ಘಾಟ್‌ಕೋಪರ್, ಮುಲುಂಡ್ ಮತ್ತು ವಿಖ್ರೋಲಿ ಉಪನಗರಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಥಾಣೆ, ಅಂಬರ್‌ನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ.

ಕೇವಲ ಮುಂಬೈ ಮಾತ್ರವಲ್ಲ, ಮಹಾರಾಷ್ಟ್ರ ಹಲವು ಜಿಲ್ಲೆಗಳಿಗೆ ಈಗಾಗಲೇ ಭಾರೀ ಮಳೆ ಹಾಗೂ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಥಾಣೆ, ಪಾಲ್‌ಘರ್, ರಾಯ್‌ಗಢ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಬಿರುಗಾಳಿಯ ರಭಸಕ್ಕೆ ಮುಂಬೈನ ಘಟಕೋಪುರದ ಪೆಟ್ರೋಲ್ ಬಂಕ್ ಮೇಲೆ ದೊಡ್ಡದಾಗಿ ನಿರ್ಮಿಸಲಾಗಿದ್ದ ಜಾಹೀರಾತು ಫಲಕ ಗಾಳಿಯ ರಭಸಕ್ಕೆ ಕುಸಿಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಜಾಹೀರಾತು ಫಲಕ ಬಿದ್ದ ಪರಿಣಾಮ ಪೆಟ್ರೋಲ್ ಬಂಕ್‌ನಲ್ಲಿದ್ದ 7 ಮಂದಿಗೆ ತೀವ್ರ ಗಾಯಗಳಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net