ತನ್ನ ತಾನರಿವ ಕಿಂಚಿತ್ ಯತ್ನವೂ ಮನಸ್ಸನ್ನು ನಿಯಂತ್ರಿಸೀತು

dv
Published on
ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ|

ಹುಲಿಕಪಿಗಳವಿತಿರದ ನರಜಂತುವೆಲ್ಲಿ?||

ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು|

ಕುಲುಕದಿರು ಬಾಲವನು-ಮಂಕುತಿಮ್ಮ||380||

ಹುಲಿಯನ್ನು ಹುಲಿಯು ಕೆಣಕುತ್ತದೆ, ಕೋತಿಯನ್ನು ಕೋತಿಯು ಅಣಕಿಸುತ್ತದೆ. ಹುಲಿಕಪಿಗಳು ಅವಿತುಕೊಂಡಿರದೆ ಇರುವ ಮನುಷ್ಯನೆಲ್ಲಿದ್ದಾನೆ? ಮಲಗಿರುವ ಪ್ರಾಣಿಯನ್ನು ಹಾಗೆಯೇ ಇರಲು ಬಿಡುವುದೇ ಜಾಣತನ. ಬಾಲವನ್ನು ಕುಲುಕಿ ಎಚ್ಚರಿಸದಿರು ಎನ್ನುತ್ತದೆ ಈ ಕಗ್ಗ.

ಸೃಷ್ಟಿಯಲ್ಲಿ ಉಳಿದೆಲ್ಲ ಪ್ರಾಣಿಗಳಿಗಿಂತ ಮನುಷ್ಯನಿಗೆ ವಿಶೇಷವಾದ ಶಕ್ತಿಯು ಪ್ರಾಪ್ತವಾಗಿದೆ. ಭಾವ-ಬುದ್ಧಿಗಳನ್ನು ಬಳಸಬಲ್ಲ, ಹೊಳೆದುದನ್ನು ಹೇಳಬಲ್ಲ. ಪಂಚೇಂದ್ರಿಯಗಳ ಮೂಲಕ ಪಡೆದ ಜಗದ ಅರಿವನ್ನು ಇನ್ನಷ್ಟೂ ವಿಸ್ತರಿಸಿ ಸೃಜನಾತ್ಮಕವಾಗಿ ಬೆಳೆಯಬಲ್ಲ. ತನ್ನ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಆಳಬಲ್ಲ, ಅಂತರಿಕ್ಷಕ್ಕೂ ಹಾರಬಲ್ಲ, ನೀರಿನಾಳದಲ್ಲಿ ಈಜಬಲ್ಲ, ಭೂಮಿಯ ಗರ್ಭದಲ್ಲಿರುವುದನ್ನು ಶೋಧಿಸಿ ಪಡೆಯಬಲ್ಲ. ದೈಹಿಕವಾದ ಯಾವುದೇ ಸಾಮರ್ಥ್ಯವಿಲ್ಲದೆ ಇದ್ದರೂ ಮತಿಶಕ್ತಿಯಿಂದ ಎಲ್ಲವನ್ನೂ ಸಮರ್ಥವಾಗಿ ಆಳಬಲ್ಲ. ಹೀಗಿದ್ದರೂ ಮನುಷ್ಯನು ತನ್ನನ್ನು ತಾನು ಗೆಲ್ಲುವುದು ಸುಲಭ ಸಾಧ್ಯವಲ್ಲ. ಬಯಕೆಗಳಿಗೆ ವಶನಾಗಿ ಭಾವಾವೇಶಕ್ಕೆ ಒಳಗಾಗುವ ಮನುಜನು ವಿವೇಚನೆಯನ್ನು ಕಳೆದುಕೊಂಡು ಮೃಗಗಳಂತೆ ವ್ಯವಹರಿಸುತ್ತಾನೆ. ಕೆಲವೊಮ್ಮೆ ಅದನ್ನೂ ಮೀರಿ ಪೈಶಾಚಿಕವಾಗಿ ವರ್ತಿಸುವುದೂ ಇದೆ.

ಕಾಡಿನಲ್ಲಿ ಹುಲಿಗೆ ತನ್ನದೇ ಆದ ಸರಹದ್ದು ಇದೆ. ಅದನ್ನು ದಾಟಿ ಯಾವುದೇ ಹುಲಿ ಬಂದರೂ, ಸನಿಹದಲ್ಲಿ ಕಂಡರೂ ಪರಸ್ಪರ ವಿರೋಧಿಸುತ್ತವೆ, ಕಾದಾಟಕ್ಕೆ ತೊಡಗುತ್ತವೆ, ಸುಮ್ಮನಾದರೂ ಕೆಣಕಿ ಜಗಳ ಕಾಯುತ್ತವೆ. ಇದು ಹುಲಿಯಷ್ಟೇ ಅಲ್ಲ ನಾಯಿ, ಬೆಕ್ಕು, ಆನೆ ಮುಂತಾದವುಗಳ ನಡುವೆಯೂ ಈ ಪ್ರತಿರೋಧ, ಪ್ರತಿಘಾತ ಗುಣವಿದೆ. ಹೀಗೆಯೇ ಚಂಚಲತೆಗೆ ನಿರೂಪವಾದ ಕೋತಿಗಳು ಒಂದು ಇನ್ನೊಂದನ್ನು ಅಣಕಿಸುತ್ತವೆ, ಬಲಿಷ್ಠವಾದುದು ಬಲಹೀನವಾದವುಗಳನ್ನು ಹೆದರಿಸುತ್ತವೆ, ಕಸಿದುಕೊಳ್ಳುತ್ತವೆ. ಗುಂಪಾಗಿ ಬದುಕುತ್ತವಾದರೂ ಅವುಗಳೊಳಗೆ ಕಚ್ಚಾಟ ತಪ್ಪುವುದಿಲ್ಲ. ಕೊಟ್ಟು ತಿನ್ನುವುದಕ್ಕಿಂತಲೂ ಕಸಿದು ತಿನ್ನುವ ವರ್ತನೆಯನ್ನೇ ಕಾಣುತ್ತೇವೆ. ಸುಮ್ಮನಿರದೆ ಏನಾದರೂ ಪಜೀತಿಗಳನ್ನೆಸಗುತ್ತಾ ದಾಂಧಲೆ ಎಬ್ಬಿಸುವುದು ಕೋತಿಗಳ ಹುಟ್ಟುಗುಣ. ಮನುಷ್ಯನೂ ಪ್ರಾಣಿ ಪ್ರಪಂಚಕ್ಕೆ ಸೇರಿದವನು. ವಿವೇಕವುಳ್ಳವನಾದರೂ ಅದನ್ನು ಬಳಸುವುದು ಕಡಿಮೆ. ಜಾಣನಹುದಾದರೂ ಪ್ರಬುದ್ಧನಲ್ಲ. ಅವನೊಳಗೆ ಕೆಣಕುವ ಹುಲಿಯ ಗುಣವಿದೆ. ಅಣಕಿಸುವ ಕೋತಿಯ ಸ್ವಭಾವವಿದೆ. ವಂಚಿಸುವ ನರಿ ಬುದ್ಧಿಯೂ ಇದೆ, ಇವೆಲ್ಲಾ ನಕಾರಾತ್ಮಕ ಗುಣಗಳನ್ನು ಪ್ರಾಣಿಗಳಿಗೆ ಆರೋಪಿಸಿದವನು ಮನುಷ್ಯನೆ ಎನ್ನುವುದು ಇನ್ನೊಂದು ವಿಶೇಷ. ತನ್ನೊಳಗಿರುವ ದೌರ್ಬಲ್ಯಗಳನ್ನು ಆತ ಹೊರಜಗತ್ತಿನಲ್ಲಿ ಕಾಣುತ್ತಾನೆ. ಮನಸ್ಸಿನಂತೆ ಮಾತು, ವರ್ತನೆಗಳು ತಾನೆ?

ಮನುಷ್ಯನನ್ನುಳಿದು ಎಲ್ಲ ಪ್ರಾಣಿಗಳಿಗೂ ಅವುಗಳದ್ದೇ ಆದ ಜೀವನಕ್ರಮವಿದೆ. ಅದನ್ನು ಬಿಟ್ಟು ಅವುಗಳು ಇನ್ನೊಂದಾಗಲು ಬಯಸುವುದಿಲ್ಲ. ಆದರೆ ಮನುಷ್ಯನು ಹಾಗಲ್ಲ. ಅನುಕರಣೆ, ಅನುಸರಣೆ, ಅನುರಕ್ತಿಗೆ ಒಳಗಾಗಿ ತನ್ನತನವನ್ನು ಮರೆತು ವ್ಯವಹರಿಸುತ್ತಾನೆ. ತನ್ನ ಘನತೆಯನ್ನು ಗ್ರಹಿಸದೆ ತಪ್ಪುಗಳನ್ನೆಸಗುತ್ತಾನೆ. ಬಾಹ್ಯಲೋಕದ ಆಕರ್ಷಣೆಗಳು ಮನುಜ ಮನದ ಬಯಕೆಗಳನ್ನು ಕೆಣಕುತ್ತವೆ. ಅವನ ವರ್ತನೆಗಳನ್ನು ಅಣಕಿಸುತ್ತವೆ. ಆತನೊಳಗೆ ಬೇಕೆನುವ ಚಡಪಡಿಕೆ, ನನ್ನದೆನ್ನುವ ಮೋಹ, ನಾನು ಎನ್ನುವ ಅಹಂಭಾವ ಇದ್ದಾಗ ಬಹಳ ಬೇಗ ಬಾಹ್ಯ ಶಕ್ತಿಗಳಿಂದ ಪ್ರಚೋದಿತನಾಗುತ್ತಾನೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಕ್ಕೆ ಒಳಗಾಗುವ ಮನಸ್ಸು ಮತಿಯನ್ನು ಮಂಕಾಗಿಸುತ್ತದೆ. ಇದರಿಂದಾಗಿ ಅನೇಕ ಅವಘಡಗಳು, ಅಚಾತುರ್ಯಗಳು ಸಂಭವಿಸುತ್ತವೆ.

ಹೀಗೆ ಮನುಷ್ಯನು ಪ್ರಾಣಿ ಸಹಜವಾಗಿ ವರ್ತಿಸದೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕೆಂದರೆ ಆತನಲ್ಲಿ ಆತ್ಮಪ್ರಜ್ಞೆಯು ಜಾಗೃತವಾಗಬೇಕು. ತನ್ನ ತಾನರಿಯುವ ಕಿಂಚಿತ್ ಯತ್ನವೂ ಕೂಡಾ ಮನುಷ್ಯ ಮನಸ್ಸನ್ನು ನಿಯಂತ್ರಿಸಬಲ್ಲುದು. ಹಾಗಾಗಿ ಮನುಜನಲ್ಲಿರಬಹುದಾದ ಮೃಗೀಯ ಸ್ವಭಾವಗಳು ಇಲ್ಲವಾಗಿ ಮನುಷ್ಯತ್ವವು ದೃಢವಾಗಬೇಕೆಂದರೆ ಮನಸ್ಸನ್ನು ಕೆರಳಿಸುವ, ಪ್ರಚೋದಿಸುವ ವಸ್ತು- ವಿಚಾರಗಳಿಂದ ದೂರವಿರಬೇಕು. ತನ್ನ ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದೆ ನಿಜವಾದ ಸಾಧನೆ. ಎಂತಹ ಪ್ರತಿಕೂಲ ಸಂದರ್ಭಗಳಲ್ಲೂ ಮಾನವತೆಯನ್ನು ಬಿಡದೆ ಪಾಲಿಸುವ, ಒಳಮನದ ಶಾಂತಿಯನ್ನು ಕದಡದಂತೆ ಇಟ್ಟುಕೊಳ್ಳುವ ದೃಢತೆಯು ವ್ಯಕ್ತಿಯನ್ನು ಮಹಾತ್ಮನನ್ನಾಗಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net