

ಶಿವಮೊಗ್ಗ: CM ಸಿದ್ದರಾಮಯ್ಯ ಅವರ ಬಗ್ಗೆ ಆಡಳಿತ ಪಕ್ಷದ ಶಾಸಕರೇ ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪದೇ ಪದೆ ಬೆಂಗಳೂರಿಗೆ ಬರುತ್ತಿದ್ದಾರೆ. ಬಂದಾಗಲೆಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಮೂರು ದಿನಗಳವರೆಗೆ ಇರಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ನೂರು ಶಾಸಕರಿದ್ದು, ಅವರಿಗೂ ಅವಕಾಶ ಕೂಡಬೇಕೆಂಬ ಹೇಳಿಕೆ ಶಾಸಕರಿಂದ ವ್ಯಕ್ತವಾಗುತ್ತಿದೆ. ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ರಾಜು ಕಾಗೆ ಹೇಳಿಕೆ ನೋಡಿದರೆ ಅದು ಗೊತ್ತಾಗುತ್ತದೆ. ಒಟ್ಟಾರೆ ಆಡಳಿತ ಪಕ್ಷದ ಶಾಸಕರು ಸಿಎಂ ಮೇಲಿನ ವಿಶ್ವಾಸ ಕಳೆದುಕೊಂಡಿರುವುದು ಸತ್ಯ ಎಂದರು.
ಮುಖ್ಯಮಂತ್ರಿ ಸ್ಥಾನಪಲ್ಲಟವಾದರೆ ಬಿಜೆಪಿ ಮತ್ತು ರಾಜ್ಯದ ಜನತೆಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಥಾನ ಪಲ್ಲಟ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 15 ಬಜೆಟ್ ಮಂಡನೆ ಮಾಡಿದ ಅನುಭವಿ ಸಿದ್ದರಾಮಯ್ಯ ಅವರ ಆಡಳಿತ ವ್ಯವಸ್ಥೆ ಪೂರ್ಣ ಕುಸಿದುಬಿದ್ದಿದೆ. ಹಣಕಾಸಿನ ಪರಿಸ್ಥಿತಿ ಕುಸಿದಿದ್ದು, ಮುಂದೆ ಯಾರೇ ಸಿಎಂ ಆಗಿ ಬಂದರೂ ಅಭಿವೃದ್ಧಿ ಸಾಧ್ಯವಿಲ್ಲ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.