ರಾಜ್ಯಾದ್ಯಂತ ಪಡಿತರ ಸಾಗಣೆ ಸ್ಥಗಿತ: ಆಹಾರ ಇಲಾಖೆ ಗೋದಾಮು ಮುಂಭಾಗ ಲಾರಿ ಮಾಲೀಕರ ಪ್ರತಿಭಟನೆ

annabhagya
Published on

ಬೆಂಗಳೂರು: ಕಾಮಗಾರಿಗಳನ್ನು ನಿರ್ವಹಿಸಿ ಹಲವು ವರ್ಷ ಕಳೆದರೂ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಸಂಕಷ್ಟಪಡುತ್ತಿರುವ ಬೆನ್ನಲ್ಲೇ ಇದೀಗ ಪಡಿತರ ಸಾಗಣೆ ಮಾಡುವ ಲಾರಿ ಮಾಲೀಕರು, ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಫೆಬ್ರವರಿಯಿಂದ ಜೂನ್‌ವರೆಗೆ ಪಡಿತರ ಸಾಗಿಸಿದ್ದ ಸಂಬಂಧ ಪಾವತಿಸಬೇಕಿದ್ದ 260 ಕೋಟಿ ರೂ. ಹಣವನ್ನು ಆಹಾರ ಇಲಾಖೆ ಬಿಡುಗಡೆ ಮಾಡದೆ ಹಿನ್ನೆಲೆಯಲ್ಲಿ ಲಾರಿ ಮಾಲೀಕರು, ಮಂಗಳವಾರದಿಂದ ಪಡಿತರ ಸಾಗಣೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ ಆಫ್​ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಆಂಡ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಿ.ಆರ್.ಷಣ್ಮುಗಪ್ಪ ಮಾತನಾಡಿ, ರಾಜ್ಯದ ‘ಅನ್ನಭಾಗ್ಯ’ ಹಾಗೂ ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ ಭಾರತೀಯ ಆಹಾರ ನಿಗಮ(ಎಫ್​​ಸಿಐ) ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು 4.50 ಲಕ್ಷ ಮೆ.ಟನ್ ಪಡಿತರವನ್ನು ಸಾಗಣಿ ಮಾಡುತ್ತಿದ್ದೇವೆ. 5 ತಿಂಗಳಲ್ಲಿ ಬರೋಬ್ಬರಿ 20 ಲಕ್ಷ ಮೆ.ಟನ್ ಆಹಾರ ಪದಾರ್ಥ ಸಾಗಣೆ ಮಾಡಿದ್ದೇವೆ.ಜೂ.19ರಂದು ಸರ್ಕಾರ,ನಮ್ಮ ಜೊತೆ ಮಾತುಕತೆ ನಡೆಸಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದರೂ ಈವರೆಗೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಾಜು 4 ಸಾವಿರ ಲಾರಿಗಳು ಆಹಾರ ಧಾನ್ಯ ಸಾಗಿಸುತ್ತಿವೆ. ಇವುಗಳಲ್ಲಿ ಸಾವಿರ ಲಾರಿಗಳು ಗುತ್ತಿಗೆ ಆಧಾರಿತವಾಗಿದ್ದರೆ, 3,500 ಲಾರಿಗಳು ಮಾಲೀಕತ್ವದಾಗಿವೆ. ಬಾಕಿ ಹಣ ಬಿಡುಗಡೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ವೆಚ್ಚ, ರಸ್ತೆ ತೆರಿಗೆ ಮತ್ತು ಸಿಬ್ಬಂದಿಗೆ ವೇತನ ಪಾವತಿಸಲು ಪರದಾಡುತ್ತಿದ್ದೇವೆ. ಪ್ರತಿ ತಿಂಗಳು ಕಂತು ಕಟ್ಟಿಲ್ಲವೆಂದು ಫೈನಾನ್ಸಿ ಸಂಸ್ಥೆಗಳು ಲಾರಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಕುಟುಂಬ ನಿರ್ವಹಣೆಗೂ ಕಷ್ಟಪಡುವಂತಾಗಿದೆ ಎಂದು ಷಣ್ಮುಗಪ್ಪ ಅಳಲು ತೋಡಿಕೊಂಡಿದ್ದಾರೆ.

ಸಿಎಂ, ಡಿಸಿಎಂ ಗಮನಿಸಿ: 9 ತಿಂಗಳ ಹಿಂದೆ ಟೆಂಡರ್‌ದಾರರು ಪ್ರತಿ ಟೆಂಡರ್‌ಗೆ 4 ಲಕ್ಷ ರೂ.ಭದ್ರತಾ ಠೇವಣಿ ಕಟ್ಟಿದ್ದಾರೆ. ಒಟ್ಟು 30 ಕೋಟಿ ರೂ.ಭದ್ರತಾ ಠೇವಣಿ ಬಾಕಿ ಇದೆ. ಕಾರ್ಮಿಕರ ಪಿಎಫ್​​, ಇಎಸ್‌ಐ ಹಣವನ್ನು ಸರ್ಕಾರ ಪಾವತಿಸುತ್ತಿಲ್ಲ. ಕೋವಿಡ್ ವೇಳೆ ಹಣ ಪಡೆಯದೆ ಪಡಿತರ ಸಾಗಿಸಿದ್ದೇವೆ. ಈ ವೇಳೆ ಸಾಕಷ್ಟು ಲಾರಿ ಚಾಲಕರು ಮೃತಪಟ್ಟಿದ್ದಾರೆ. ಮೇಲಿನ ಎಲ್ಲ ಸಮಸ್ಯೆಗಳ ಈಡೇರಿಕೆಗಾಗಿ ಜು.8ರಿಂದಪಡಿತರವನ್ನು ಲೋಡ್ ಮಾಡುವುದಿಲ್ಲ. ಇಲಾಖೆ ಗೋದಾಮುಗಳಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಗಮನ ಹರಿಸಬೇಕೆಂದು ಷಣ್ಮುಗಪ್ಪ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net