

ಶಿಮ್ಲಾ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹಕ್ಕೆ ಹಿಮಾಚಲ ಪ್ರದೇಶದ ಬಹುತೇಕ ಭಾಗ ತತ್ತರಿಸಿ ಹೋಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಉತ್ತರಾಖಂಡ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ರಸ್ತೆಗಳು ಕುಸಿಯುತ್ತಿವೆ. ವಾಹನಗಳು ಕೊಚ್ಚಿ ಹೋಗುತ್ತಿವೆ ಮತ್ತು ಮನೆಗಳು ಕುಸಿದು ಬೀಳುತ್ತಿವೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದರ ನಡುವೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದ ವಿಡಿಯೋವೊಂದು ಪ್ರವಾಹದ ಭಯಾನಕತೆಯನ್ನು ಜನರ ಕಣ್ಣ ಮುಂದೆ ತೆರೆದಿಟ್ಟಿದೆ. ವಿಡಿಯೋದಲ್ಲಿ ಕುಲು-ಮನಾಲಿಯ ರಾಷ್ಟ್ರೀಯ ಹೆದ್ದರಿಯು ಭಾರೀ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಇದಲ್ಲದೆ, ವಾಹನಗಳು ಪ್ರವಾಹದ ನಡುವೆ ಸಿಲುಕಿದ್ದು, ಆ ವಲಯದಲ್ಲಿ ಜನರ ಸಹಜ ಜೀವನಕ್ಕೆ ಅಡ್ಡಿಯಾಗಿದೆ.
ಮನಾಲಿ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಂಡೋಹ್ (ಮಂಡಿ) ಡ್ಯಾಮ್ನಿಂದ ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ನದಿ ತೀರ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ತೆರಳದಂತೆ ನುರ್ಪೂರ್ ಠಾಣಾ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಒಟ್ಟು 39 ಎನ್ಡಿಆರ್ಎಫ್ ತಂಡಗಳನ್ನು ಪ್ರವಾಹ ಪೀಡಿತ ನಾಲ್ಕು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಪಂಜಾಬ್ನಲ್ಲಿ 14, ಹಿಮಾಚಲ ಪ್ರದೇಶದಲ್ಲಿ 12, ಉತ್ತರಾಖಂಡದಲ್ಲಿ 8 ಮತ್ತು ಹರಿಯಾಣದಲ್ಲಿ 5 ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಉತ್ತರ ಭಾರತದಲ್ಲಿ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸೋಮವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಪ್ರವಾಹ ಪರಿಸ್ಥಿತಿಯ ಮಾಹಿತಿಯನ್ನು ಪಡೆದಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)