

ವಿಜಯಪುರ/ ಬೆಳಗಾವಿ: ಸಾವಿರಾರು ವರ್ಷಗಳಷ್ಟು ಹಳೆಯ ದಾಖಲೆ ಇರುವ ಮಠಗಳು, ದೇವಾಲಯಗಳು, ರೈತರ ಜಮೀನುಗಳು. ಐತಿಹಾಸಿಕ ಸ್ಮಾರಕಗಳ ಪಹಣಿಯಲ್ಲಿ ಸರ್ಕಾರದ ಸಹಕಾರವಿಲ್ಲದೆ ವಕ್ಪ್ ಆಸ್ತಿಯಾಗಿ ಬದಲಿಸಲು ಹೇಗೆ ಸಾಧ್ಯ? ಇದೊಂದು ಗಂಭೀರ ವಿಷಯವಾಗಿದ್ದು, ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ವಕ್ಪ್ (ತಿದ್ದುಪಡಿ) ವಿಧೇಯಕದ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಭರವಸೆ ನೀಡಿದರು.
ಗುರುವಾರ ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ವಕ್ಪ್ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿದ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ ಏಕಾಏಕಿ ಕಂದಾಯ ದಾಖಲೆಗಳ ತಿದ್ದುಪಡಿಯಾಗುತ್ತಿರುವ ವಿಷಯವನ್ನು ಜೆಪಿಸಿ ಗಂಭೀರವಾಗಿ ಪರಿಗಣಿಸಿದೆ. ಸಾವಿರಾರು ವರ್ಷಗಳಷ್ಟು ಹಳೆಯ ದಾಖಲೆ ಇರುವ ಜಮೀನನ್ನು ವಕ್ಪ್ ಆಸ್ತಿ ಎಂದು ಘೊಷಿಸುತ್ತಿದ್ದಾರೆ. ಆಸ್ತಿ ಹಕ್ಕಿನಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಸರ್ಕಾರ, ಅಧಿಕಾರಿಗಳ ಸಹಕಾರದಿಂದಲೇ ಕರ್ನಾಟಕದಲ್ಲಿ ವಕ್ಪ್ ಮಂಡಳಿ ವ್ಯವಸ್ಥಿತವಾಗಿ ಜಮೀನು ಕಬಳಿಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕರ್ನಾಟಕ ಸರ್ಕಾರವು ರೈತರಿಗೆ ನೀಡಿರುವ ನೋಟೀಸ್ ವಾಪಸ್ ಪಡೆಯುವುದಾಗಿ, ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಸಮಸ್ಯೆ ಪರಿಹಾರ ಆಗಿಲ್ಲ. ದಾಖಲೆಗಳಲ್ಲಿ ಅಕ್ರಮವಾಗಿ ಸೇರ್ಪಡೆ ಮಾಡಿರುವ ವಕ್ಪ್ ಹೆಸರು ತೆಗೆದು ಹಾಕುವ ಕೆಲಸ ಮಾಡುತ್ತಿಲ್ಲ. ಹೇಗೆ ಸಾಧ್ಯ. ರೈತರು, ಶಾಸಕರು, ಸಂಸದರು ಮನವಿ ಕೊಟ್ಟಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇ.38ರಷ್ಟು ಆಸ್ತಿಗಳಿಗೆ ವಕ್ಪ್ ಬೋರ್ಡ್ ನೋಟೀಸ್ ನೀಡಿದೆ. ಈ ಎಲ್ಲ ಸಮಗ್ರ ಮಾಹಿತಿಯನ್ನು ವರದಿಯಲ್ಲಿ ಸೇರಿಸುತ್ತೇವೆ ಎಂದು ಹೇಳಿದರು.
ಇದಕ್ಕೆ ಮುನ್ನ ‘ವಕ್ಪ್ ಹಟಾವೋ-ದೇಶ ಬಚಾವೋ’ ಘೊಷ ವಾಕ್ಯದಡಿ ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಮೂರು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೂ ಭೇಟಿ ನೀಡಿದ ಪಾಲ್, ಪ್ರತಿಭಟನಾ ನಿರತ ಮುಖಂಡರು, ರೈತರು, ಮಠಾಧೀಶರಿಂದ ಮನವಿ ಸ್ವೀಕರಿಸಿದರು. ವಕ್ಪ್ ಕಾಯ್ದೆಯನ್ನೇ ತೆಗೆದು ಹಾಕಿ ಅದರ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹಿತ ನೂರಾರು ರೈತರು ಮತ್ತು ಮಠಾಧೀಶರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಜಗದಂಬಿಕಾ ಪಾಲ್ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ಕೊನೆಗೊಳಿಸಲಾಯಿತು.
ಪಾರದರ್ಶಕ ಕಾಯ್ದೆ: ಪಾರದರ್ಶಕ ರೀತಿಯಲ್ಲಿ ಕಾಯ್ದೆ ರೂಪಿಸಲು ಸಂಸದೀಯ ಸಮಿತಿ ರಚನೆಯಾಗಿದೆ. ಯಾರು ಜಮೀನು ಕಬಳಿಕೆ ಮಾಡಿದ್ದಾರೆ ಅಥವಾ ದುರುಪಯೋಗ ಮಾಡಿದ್ದಾರೆ ಎಂಬ ಅಂಶವನ್ನೂ ಪರಿಶೀಲನೆ ಮಾಡುತ್ತೇವೆ. ಭವಿಷ್ಯದಲ್ಲಿ ವಕ್ಪ್ ಆಸ್ತಿ ಮಾರಾಟವಾಗದಂತೆ ಅದನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಲಾಗಿದೆ. ಸಂಸದ ಅಸಾದುದ್ದೀನ್ ಓವೈಸಿ ಸೇರಿ ಎಲ್ಲರೂ ಈ ಸಮಿತಿಯಲ್ಲಿ ಇದ್ದಾರೆ. ದಿನವೂ ಚರ್ಚೆ, ಅಭಿಪ್ರಾಯ ಆಧರಿಸಿ ಸಮಿತಿ ಅಧ್ಯಯನ ನಡೆಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಈ ವಿದ್ಯಮಾನದ ಅಗತ್ಯವೇನಿತ್ತು? ಈಗಾಗಲೇ ವಕ್ಪ್ಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಅಹವಾಲು ಸಲ್ಲಿಸಲು ಪೊರ್ಟಲ್ ತೆರೆಯಲಾಗಿದೆ. ಒಂದು ಕೋಟಿ ಅಹವಾಲು ದಾಖಲಾಗಿವೆ. ಮಲೇಷ್ಯಾದಲ್ಲಿ ಕುಳಿತ ಝಾಕೀರ್ ನಾಯ್್ಕ ಕೂಡ ಈ ಪೋರ್ಟಲ್ನಲ್ಲಿ ಅಭಿಪ್ರಾಯ ದಾಖಲಿಸಿ ಎಂದು ಜನರಿಗೆ ಕರೆ ನೀಡಿದ್ದಾನೆ. ಇನ್ನು ಕರ್ನಾಟಕ ಸೇರಿದಂತೆ ಅನೇಕ ಕಡೆ ಅಹವಾಲು ಸಲ್ಲಿಕೆಯಾಗುತ್ತಿವೆ. ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಧರಣಿಯಲ್ಲಿರುವುದನ್ನು ಗಮನಿಸಿದೆ. ರೈತರ ಸಾವು ಬದುಕಿನ ಪ್ರಶ್ನೆಯಾಗಿರುವುದರಿಂದ ನಾನು ಸಹ ಧರಣಿಯಲ್ಲಿ ಕುಳಿತಿರುವೆ ಎಂದು ಕೇಂದ್ರ ಸಚಿವೆ ಶೋಭಾ ಹೇಳಿದ್ದಾರೆ. ಎಷ್ಟು ಗಂಟೆ ಪ್ರಯಾಣ ಮಾಡಿದರೂ ಚಿಂತೆಯಿಲ್ಲ. ವಿಜಯಪುರಕ್ಕೆ ಭೇಟಿ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇನೆ ಎಂದರು.
ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ರಮೇಶ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡಪಾಟೀಲ ಯತ್ನಾಳ, ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕನ್ಹೇರಿ ಮಠದ ಅದೃಷ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ, ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಇತರ ಹಲವಾರು ಮುಖಂಡರಿದ್ದರು.
ರಾಜ್ಯ ಸರ್ಕಾರದ ಹೊಣೆಗಾರಿಕೆ: ಕೇಂದ್ರದಲ್ಲಿ ವಕ್ಪ್ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಚರ್ಚೆಗಳು ನಡೆದಿರುವಾಗಲೇ ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಸರ್ಕಾರಿ ಆಸ್ತಿಗಳು, ಸಾರ್ವಜನಿಕರ ಜಮೀನು, ಮಠ-ಮಾನ್ಯಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ವಕ್ಪ್ಗೆ ಸೇರ್ಪಡೆ ಗೊಳಿಸಿರುವುದು ಕಂಡುಬಂದಿದೆ. ಕೆಲವೊಂದು ಊರುಗಳೇ ವಕ್ಪ್ಗೆ ಸೇರ್ಪಡೆಯಾಗಿವೆ. ನಾನು ಉಳಿದ ಸದಸ್ಯರ ಜೊತೆ ಆಗಮಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ನನ್ನನ್ನು ಪ್ರಶ್ನೆ ಮಾಡುವ ಮೊದಲು ನೀವು ನೋಟಿಸ್ ನೀಡುವ ಅವಶ್ಯಕತೆ ಏನಿತ್ತು? ಜನರ ಆತಂಕ ನಿವಾರಣೆಯ ಹೊಣೆ ಗಾರಿಕೆ ರಾಜ್ಯ ಸರ್ಕಾರದಲ್ಲವೇ ಎಂದು ಜಗದಾಂಬಿಕಾ ಪಾಲ್ ಪ್ರಶ್ನಿಸಿದ್ದಾರೆ.
ಇದು ಸಾವಿರಾರು ರೈತರ ಸಮಸ್ಯೆ: ಇಂಡಿ ತಾಲೂಕಿನ ರೈತರ ಉದಾಹರಣೆ ಉಲ್ಲೇಖಿಸಿದ ಪಾಲ್, ‘ಮಲ್ಲಿಕಾರ್ಜುನ ಎಂಬ ರೈತ ನನ್ನನ್ನು ಭೇಟಿ ಮಾಡಿ ತನ್ನ ಜಮೀನು ದಾಖಲೆಯಲ್ಲಿ ವಕ್ಪ್ ಎಂದು ನಮೂದಿಸಿದ್ದಾರೆ. ನನಗೆ ಓದಲು ಬರುವುದಿಲ್ಲ. ಆದರೆ ಅನೇಕ ದಶಕಗಳಿಂದ ಈ ಭೂಮಿ ಉಳುಮೆ ಮಾಡುತ್ತಿದ್ದೇನೆ, ಈಗ ವಕ್ಪ್ ಎನ್ನುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡ. ಇದು ಒಬ್ಬ ಮಲ್ಲಿಕಾರ್ಜುನನ ಸಮಸ್ಯೆಯಲ್ಲ, ಸಾವಿರಾರು ರೈತರಲ್ಲಿ ಆತಂಕ ಎದುರಾಗಿದೆ, ಈ ಆತಂಕಕ್ಕೆ ಯಾರು ಹೊಣೆ? ಸಾವಿರಾರು ರೈತರ ಸಮಸ್ಯೆಯಾಗಿದ್ದರಿಂದ ಇಲ್ಲಿಗೆ ಧಾವಿಸಿ ಬಂದಿರುವುದಾಗಿ ತಿಳಿಸಿದರು.
ವಕ್ಪ್ ಬೋರ್ಡ್ ಸಂಬಂಧ ಕೇಂದ್ರದಿಂದ ಜಂಟಿ ಸಂಸದೀಯ ಸಮಿತಿ ಆಗಮಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ಹಿಂದೆ ಯಾವಾಗಾದರೂ ಸಮಿತಿಯು ರಾಜಕ್ಕೆ ಆಗಮಿಸಿದೆಯೇ? ರಾಜ್ಯದಲ್ಲಿ ವಕ್ಪ್ ಬೋರ್ಡ್ ನಿಂದ ರೈತರಿಗೆ ನೀಡಿರುವ ನೋಟಿಸ್ಗಳನ್ನು ವಾಪಸ್ ಪಡೆಯಲಾಗುವುದು ಹಾಗೂ ದಾಖಲಾತಿಗಳು ತಿದ್ದುಪಡಿಯಾಗಿದ್ದರೆ ರದ್ದು ಮಾಡಲಾಗುವುದು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಕರಾಳ ವಕ್ಪ್ ಕಾಯ್ದೆಯಿಂದಾಗಿ ರೈತರಿಗೆ ಬದುಕಿನ ಪ್ರಶ್ನೆ ಎದುರಾಗಿದೆ. ವಕ್ಪ್ ಹೆಸರಲ್ಲಿ ಮಠ-ಮಾನ್ಯಗಳು, ಸರ್ಕಾರಿ ಜಮೀನು, ರೈತರ ಆಸ್ತಿಗಳನ್ನು ಸಹ ಕಬಳಿಸಲಾಗುತ್ತಿದೆ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ವಕ್ಪ್ ಪದವೇ ಇರಲಿಲ್ಲ. ನೆಹರು ಈ ಕಾನೂನು ತಂದರು. ಈಗ 38 ಲಕ್ಷ ಎಕರೆ ಜಮೀನು ವಕ್ಪ್ ಹೆಸರಲ್ಲಿದೆ. ಇದು ಹೇಗೆ ಬಂತು?
| ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ