ರೈತರಿಗೆ ಟೋಲ್ ವಿನಾಯಿತಿ ಬಗ್ಗೆ ನಿರ್ಧರಿಸಿ:  ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

High Court 3 Jan 20
Published on

ಬೆಂಗಳೂರು: ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆ ಸಂದರ್ಭ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಸಾಧ್ಯತೆ ಬಗ್ಗೆ ನಿರ್ಧಾರ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಲಾಕ್​ಡೌನ್​ನಿಂದ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.

ನಿಯಮಗಳ ಪ್ರಕಾರ ರೈತರು ಟೋಲ್ ಶುಲ್ಕ ಪಾವತಿಸಲೇಬೇಕಿದ್ದು, ವಿನಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ವಿಚಾರಣೆ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೃಷಿ ಉತ್ಪನ್ನಗಳಿಗೆ ಮೊದಲೇ ಕಡಿಮೆ ಬೆಲೆ ಸಿಗುತ್ತಿದೆ. ಇಂಥ ಸಂದರ್ಭದಲ್ಲಿ ರೈತರಿಗೆ ಫಸಲು ತೆಗೆಯಲು ಮಾಡಿರುವ ವೆಚ್ಚವೂ ಸಿಗುತ್ತಿಲ್ಲ. ಟೋಲ್ ಫ್ರೀ ಮಾಡಿದರೆ ರೈತರಿಗೆ ಕೃಷಿ, ತೋಟಗಾರಿಕಾ ಮತ್ತು ಡೈರಿ ಉತ್ಪನ್ನಗಳನ್ನು ಸಾಗಿಸಲು ನೆರವಾಗುತ್ತದೆ. ಆದ್ದರಿಂದ, ರೈತರಿಗೆ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯಿಂದ ಸೀಮಿತ ಅವಧಿಗೆ ವಿನಾಯಿತಿ ನೀಡುವ ಬಗ್ಗೆ ನಿರ್ಧರಿಸಿ ಕೋರ್ಟ್​ಗೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.

ಸಭೆ ನಡೆಸಲು ಸೂಚನೆ

ಲಾಕ್​ಡೌನ್ ಅವಧಿಯಲ್ಲಿ ರಾಜ್ಯದ ರೈತರು ಎದುರಿಸುತ್ತಿರುವ ಸಂಕಷ್ಟದ ನಿವಾರಣೆಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ಮೈಸೂರಿನ ಈರುಳ್ಳಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನ್ಯಾಯಪೀಠದ ಗಮನಕ್ಕೆ ತಂದಾಗ ಈ ಸೂಚನೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net