

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಪರಿಹಾರ ಕಾರ್ಯಚಟುವಟಿಕೆ ಕುರಿತು ಮುಸ್ಲಿಂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಆರ್ಎಸ್ಎಸ್ ಮುಸ್ಲಿಂ ವಿರೋಧಿ ಎಂದು ದೂಷಿಸುವುದು ಸರಿಯಲ್ಲ. ಅಂತಹ ಆರೋಪಗಳು ನಿರಾಧಾರವಾದುದು ಅಷ್ಟೇ ಅಲ್ಲ ಸತ್ಯಕ್ಕೆ ದೂರವಾದುದು. ಹೀಗೆಂದು ಆರೆಸ್ಸೆಸ್ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವಿದೇಶಿ ಮಾಧ್ಯಮ ಸಂಸ್ಥೆ ಪ್ರತಿನಿಧಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವಾಗ ಸ್ಪಷ್ಟಪಡಿಸಿದ್ದಾರೆ.
ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ ಆ ಕ್ಷಣದಿಂದಲೇ ಆರೆಸ್ಸೆಸ್ ನಾಯಕರು ದೆಹಲಿಯ ಶಹೀನ್ ಭಾಗ್ನಲ್ಲಿ ಮುಸ್ಲಿಂ ನಾಯಕರಷ್ಟೇ ಅಲ್ಲ ದೇಶದ ಎಲ್ಲ ರಾಜ್ಯಗಳ ಪ್ರಮುಖ ಮುಸ್ಲಿಂ ನಾಯಕರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲ ಕಡೆಯಲ್ಲೂ ಆರೆಸ್ಸೆಸ್ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರೆಲ್ಲೂ ಈ ಪರಿಹಾರ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಹೊಸಬಾಳೆ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿ ದೆಹಲಿಯ ಶಹೀನ್ ಭಾಗ್ ಗುರುತಿಸಿಕೊಂಡಿತ್ತು. ಅಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ತಬ್ಲಿಘಿ ಜಮಾತ್ ಪ್ರಕರಣದ ನಂತರದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೊಟ್ಟ ಹೇಳಿಕೆಯ ಪ್ರತಿಧ್ವನಿಯಾಗಿ ಹೊಸಬಾಳೆಯವರ ಹೇಳಿಕೆ ಹೊರಹೊಮ್ಮಿದೆ.
ಆರೆಸ್ಸೆಸ್ ನಿಲುವಿನ ವಿಚಾರವಾಗಿ ಮುಸ್ಲಿಂ ಸಮುದಾಯ ಅನೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.ತಬ್ಲಿಘಿ ಪ್ರಕರಣದಲ್ಲಿ ಭಾರತದ ಇಮೇಜ್ ಹಾಳು ಮಾಡುವ ಪ್ರಯತ್ನ ನಡೆದಿತ್ತು. ಅದನ್ನು ತಪ್ಪಿಸುವಂತೆ ಮಾಡಿದ್ದು ಭಾಗವತ್ ಅವರ ಪ್ರಯತ್ನ. ಆರ್ಎಸ್ಎಸ್ ಒಂದು ಸಂಘಟನೆಯಾಗಿ ಮುಸ್ಲಿಂ ಸಮುದಾಯದ ನಾಯಕರ ಜತೆಗೆ ಸಂಪರ್ಕದಲ್ಲಿದೆ. ಅವರೂ ಈ ದೇಶದ ಸಾಮುದಾಯಿಕ ಭಾಗವೇ ಆಗಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರು ಕೇವಲ ಹಿಂದು ಸಮುದಾಯಕ್ಕಷ್ಟೇ ಪರಿಹಾರ ಕಾರ್ಯ ಮಾಡಿಲ್ಲ. ಇಡೀ ದೇಶದ ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ಅವರು ಕೆಲಸ ಮಾಡಿದ್ದಾರೆ. ಅದರಲ್ಲಿ ಈ ಮುಸ್ಲಿಂ ಸಮುದಾಯವೂ ಸೇರಿಕೊಂಡಿದೆ. ಈ ಕೆಲಸದ ಬಗ್ಗೆ ಮುಸ್ಲಿಂ ಸಮುದಾಯದ ಅನೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆರ್ಎಸ್ಎಸ್ ನಡೆಸುವ ಶಾಲೆಯಲ್ಲಿ ಮುಸ್ಲಿಂ ಮಕ್ಕಳೂ ಕಲಿಯುತ್ತಿದ್ದಾರೆ ಎಂಬುದನ್ನೂ ಹೊಸಬಾಳೆಯವರು ಸ್ಮರಿಸಿಕೊಂಡರು. (ಏಜೆನ್ಸೀಸ್)