

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಶೇಷ, ವಿಭಿನ್ನ ಕಥಾಹಂದರವುಳ್ಳ ಹಲವು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದ್ದು, ಕೆಲವು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈ ಮಧ್ಯೆ ಸ್ಯಾಂಡಲ್ವುಡ್ನಲ್ಲಿ ಶಾಲಾ ಮಕ್ಕಳನ್ನು ಒಳಗೊಂಡ ಕಥೆಯೊಂದು ಇದೀಗ ಸಿನಿಮಾವಾಗಿ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೇ ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಮುಗಿಸಿದೆ.
ಜೇನುಕಲ್ ಪ್ರೊಡಕ್ಷನ್ ಅವರ 'ಇದು ನಮ್ ಶಾಲೆ' ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ಜೇನುಕಲ್ ಹಾಗೂ ಗೀಜಿಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 15 ದಿನಗಳ ಕಾಲ ನಿರಂತರವಾಗಿ ಚಿತ್ರತಂಡ ಶೂಟಿಂಗ್ ಮಾಡಿದೆ.
ಕೃಷ್ಣ ಬೆಳ್ತಂಗಡಿ ಕಥೆ-ಚಿತ್ರಕತೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರವಿ ಆಚಾರ್ ಹಾಗೂ ಉಮೇಶ್ ಆಚಾರ್ ನಿರ್ಮಿಸಿದ್ದಾರೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಎಂಬ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಚಿತ್ರದಲ್ಲಿ ಶಂಕರ್ ಭಟ್, ಪೂಜಾ, ಈಶ್ವರ್ ದಲ, ವಾಣಿ ಗೌಡ, ರಾಜು ನಾಯಕ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರು ಕೂಡ ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಶೀಘ್ರವೇ ನಡೆಯಲಿದೆ ಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದ್ದಾರೆ.