ಐವರು ಮೆಕ್ಸಿಕನ್ನರು ಸೇರಿ 6 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ಮೌಂಟ್​ ಎವೆರೆಸ್ಟ್ ಬಳಿ ಪತನ

Helicopter Crash
Published on

ನವದೆಹಲಿ: ಐವರು ಮೆಕ್ಸಿಕನ್ನರು ಸೇರಿದಂತೆ ಆರು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ನೇಪಾಳದಲ್ಲಿರುವ ಪ್ರಪಂಚದ ಅತ್ಯಂತ ಎತ್ತರದ ಶಿಖರ ಮೌಂಟ್​ ಎವೆರೆಸ್ಟ್​ ಬಳಿಯ ಲಾಮ್ಜುರಾದಲ್ಲಿ ಇಂದು (ಜು.11) ಪತನವಾಗಿದೆ.

ಮ್ಯಾನೇಜಿಂಗ್​ ಏರ್​ ಚಾಪರ್​ 9ಎನ್​-ಎಎಂವಿ ಇಂದು ಬೆಳಗ್ಗೆ 10.04 ನಿಮಿಷಕ್ಕೆ ಸೊಲುಖುಂಬು ಜಿಲ್ಲೆಯ ಸುರ್ಕೆ ವಿಮಾನಿ ನಿಲ್ದಾಣದಿಂದ ಕಾಠ್ಮಂಡುವಿಗೆ ನಿರ್ಮಿಸಿದ 15 ನಿಮಿಷಗಳಲ್ಲೇ ಸುಮಾರು 12 ಸಾವಿರ ಅಡಿ ಎತ್ತರದಲ್ಲಿ ಸುಮಾರು 10.13ಕ್ಕೆ ಸಂಪರ್ಕ ಕಡಿದುಕೊಂಡಿತು ಎಂದು ತ್ರಿಬುವನ್​ ಇಂಟರ್ನ್ಯಾಷನಲ್​ ಏರ್ಪೋರ್ಟ್​ನ ಮ್ಯಾನೇಜರ್​ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.

ಅಂದಹಾಗೆ ಸೊಲುಖುಂಬು ಜಿಲ್ಲೆ ಜಗತ್ತಿನ ಎತ್ತರದ ಶಿಖರ ಮೌಂಟ್​ ಎವೆರೆಸ್ಟ್​ ಸೇರಿದಂತೆ ಹಲವು ಶಿಖರಗಳು ತವರಾಗಿದೆ. ಪತನಗೊಂಡ ಚಾಪರ್​ನಲ್ಲಿ ಐವರು ಮೆಕ್ಸಿಕನ್ನರಿದ್ದರು. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸೀನಿಯರ್​ ಕ್ಯಾಪ್ಟನ್​ ಚೆಟ್​ ಬಿ ಗುರುಂಗ್​ ಅವರು ಚಾಪರ್​ನ ಪೈಲಟ್​ ಆಗಿದ್ದರು.

ಭಕಾಂಜೆ ಗ್ರಾಮದಲ್ಲಿ ಪತ್ತೆ

ಮನಾಂಗ್​ ಏರ್​ ಕಂಪನಿಯ ಹೆಲಿಕಾಪ್ಟರ್ ಲಾಮ್ಜುರಾ ಪಾಸ್​ಗೆ ತಲುಪುತ್ತಿದ್ದಂತೆ ಸಿಗ್ನಲ್​ ಟವರ್​ ಜೊತೆ ಸಂಪರ್ಕ ಕಡಿದುಕೊಂಡಿತು ಮತ್ತು ವೈಬರ್‌ನಲ್ಲಿ ಹೆಲಿಕಾಪ್ಟರ್ ಕೇವಲ 'ಹಲೋ' ಎಂಬ ಸಂದೇಶವನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿಯಾಗಿದೆ. ತೀವ್ರ ಹುಡುಕಾಟದ ನಡುವೆ, ಕೆಲವು ಗಂಟೆಗಳ ನಂತರ ಪತನಗೊಂಡ ಹೆಲಿಕಾಪ್ಟರ್​ ಅವಶೇಷಗಳು ಲಾಮಜುರಾದ ಭಕಾಂಜೆ ಗ್ರಾಮದಲ್ಲಿ ಪತ್ತೆಯಾಗಿವೆ.

ಮನಾಂಗ್​ ಏರ್​ ಕಂಪನಿಯನ್ನು 1997ರಲ್ಲಿ ಸ್ಥಾಪಿಸಲಾಯಿತು. ಇದೊಂದು ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಇರುವ ಹೆಲಿಕಾಪ್ಟರ್​ ವಾಯು ನೆಲೆಯಾಗಿದೆ. ಇದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ನೇಪಾಳದ ಪ್ರದೇಶದೊಳಗೆ ವಾಣಿಜ್ಯ ವಾಯು ಸಾರಿಗೆಯಲ್ಲಿ ಹೆಲಿಕಾಪ್ಟರ್‌ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದೆ.

ನೇಪಾಳವು ಹಲವು ವಿಮಾನ ಅಪಘಾತಗಳ ಕರಾಳ ಇತಿಹಾಸವನ್ನು ಹೊಂದಿದೆ. ಹಲವಾರು ವಿಮಾನಯಾನ ಸಂಸ್ಥೆಗಳು ನೇಪಾಳದ ದೂರದ ಬೆಟ್ಟಗಳು ಮತ್ತು ಪರ್ವತಗಳಲ್ಲಿ ಮೋಡಗಳಿಂದ ಆವೃತವಾದ ಮತ್ತು ರಸ್ತೆಗಳಿಂದ ದೂರವಿರುವ ಸಣ್ಣ ವಿಮಾನ ನಿಲ್ದಾಣಗಳಿಗೆ ಹಾರಾಟ ನಡೆಸುತ್ತವೆ. ಇದು ಅಪಾಯಕಾರಿ ಪ್ರಯಾಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net