

ನವದೆಹಲಿ: ಮಂಗಳವಾರ ಬೆಳಗ್ಗೆ ಗಾಜಿಯಾಬಾದ್ ಬಳಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಶಾಲಾ ಬಸ್ ಮತ್ತು ಟಿಯುವಿ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಸರಿಯಾದ ಮಾರ್ಗದಲ್ಲಿ ಬರದೆ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಒಂದೇ ಕುಟುಂಬದ ಸದಸ್ಯರಾಗಿದ್ದು, ಬಸ್‌ನಲ್ಲಿ ಯಾವುದೇ ವಿದ್ಯಾರ್ಥಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಡಿಸಿಪಿ (ಟ್ರಾಫಿಕ್) ಆರ್‌ಕೆ ಕುಶ್ವಾಹಾ, “ದೆಹಲಿಯ ಗಾಜಿಪುರದಿಂದ ಸಿಎನ್‌ಜಿ ನಂತರ ಬಸ್ ಚಾಲಕ ಸರಿಯಾದ ದಿಕ್ಕಿನಲ್ಲಿ ಬಸ್ ಚಲಾಯಿಸದೆ ಬರುತ್ತಿದ್ದ. ಟಿಯುವಿ ಜೀಪ್ ಮೀರತ್‌ನ ದಿಕ್ಕಿನಿಂದ ಬರುತ್ತಿದ್ದು, ಗುರುಗ್ರಾಮ್‌ಗೆ ಹೋಗುತ್ತಿತ್ತು. ಇದು ಚಾಲಕನ ತಪ್ಪು, ಅವನು ದೆಹಲಿಯಿಂದ ಸರಿಯಾದ ದಾರಿಯಲ್ಲಿ ಬರುತ್ತಿರಲಿಲ್ಲ. ಆತನನ್ನು ಬಂಧಿಸಲಾಗಿದೆ. ಕಾರಿನಲ್ಲಿದ್ದವರು ಒಂದೇ ಕುಟುಂಬದವರು. ಬಸ್ಸಿನಲ್ಲಿ ಯಾವ ವಿದ್ಯಾರ್ಥಿಯೂ ಇರಲಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ವಿಡಿಯೋದಲ್ಲಿ ಶಾಲಾ ಬಸ್ಸು ವೇಗದಲ್ಲಿ ಬರುತ್ತಿದ್ದು, ಕಪ್ಪು ಬಣ್ಣದ ಟಿಯುವಿ ಜೀಪ್ ಚಾಲಕ ಮುಖಾಮುಖಿ ಡಿಕ್ಕಿ ಹೊಡೆಯುವುದನ್ನು ನೋಡಬಹುದು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆ ಕುರಿತು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.