ಮಾಜಿ ನೌಕಾಧಿಕಾರಿಗಳಿಗೆ ಲಕ್ಷಾಂತರ ರೂ. ಪಂಗನಾಮ: ಬಯಲಾಯ್ತು ಮಹಿಳಾ ಇನ್ಸ್​ಪೆಕ್ಟರ್ ಕಳ್ಳಾಟ!

Accused Swarnalatha
Published on

ವಿಶಾಖಪಟ್ಟಣ: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ನೌಕಾಧಿಕಾರಿಗಳಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳಾ ಇನ್ಸ್​ಪೆಕ್ಟರ್​ ಸೇರಿದಂತೆ ನಾಲ್ವರನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಿಸರ್ವ್​ ಇನ್ಸ್​ಪೆಕ್ಟರ್​ ಬಿ. ಸ್ವರ್ಣಲತಾ, ಪೊಲೀಸ್​ ಕಾನ್ಸ್​ಟೆಬಲ್​ ಎಂ. ಹೇಮಸುಂದರ್​, ಹೋಮ್​ಗಾರ್ಡ್​ ವಿ ಶ್ರೀನಿವಾಸ ಮತ್ತು ಮಧ್ಯವರ್ತಿ ವಿ. ಸೂರಿ ಬಾಬು ಎಂದು ಗುರುತಿಸಲಾಗಿದೆ. ಮಾಜಿ ನೌಕಾಧಿಕಾರಿಗಳಿಂದ ಆರೋಪಿಗಳು 12 ಲಕ್ಷಕ್ಕೂ ಅಧಿಕ ಹಣವನ್ನು ವಸೂಲಿ ಮಾಡಿದ್ದಾರೆ.

ಹಣ ದುಪ್ಪಟ್ಟು

500 ರೂ. ನೋಟು ನೀಡಿದರೆ ಅದಕ್ಕೆ ಬದಲಾಗಿ 2000 ರೂಪಾಯಿಯ ನೋಟಿನ ಭಾರೀ ಲಾಭವನ್ನು ಪಡೆಯಬಹುದು. ನಿಮ್ಮ ನಿವೃತ್ತ ಅವಧಿಯ ಸಂಪೂರ್ಣ ಹಣವನ್ನು 500 ರೂ. ನೋಟಿನ ರೂಪಲ್ಲಿ ನೀಡಿ, ಆಗ ನಿಮಗೆ 1 ಕೋಟಿ ರೂ. ಮೌಲ್ಯದ 2000 ರೂ. ನೋಟುಗಳನ್ನು ನೀಡಲಾಗುವುದು. ಬರೋಬ್ಬರಿ 10 ಲಕ್ಷ ರೂ. ಲಾಭ ಸಿಗಲಿದೆ ಎಂದು ಮಧ್ಯವರ್ತಿ ಸೂರಿ ಬಾಬು ನಂಬಿಸಿದ್ದಾರೆ.

ಹಣ ಕೊಡಲು ಒಪ್ಪಿಗೆ

ಸೂರಿ ಬಾಬು ಮಾತು ನಂಬಿದ ಮಾಜಿ ನೌಕಾಧಿಕಾರಿಗಳು ತಾವು ಸಂಗ್ರಹಿಸಿಟ್ಟಿದ್ದ ಹಣವನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಹಣವನ್ನು ಕೊಡುವ ದಿನ ಈ ವಿಚಾರವನ್ನು ಇನ್ಸ್​ಪೆಕ್ಟರ್​ ಸ್ವರ್ಣಲತಾಗೆ ಸೂರಿ ಬಾಬು ತಿಳಿಸಿದ್ದಾನೆ. ಇನ್ನೇನು ಹಣವನ್ನು ಸೂರಿ ಬಾಬುಗೆ ನೀಡಬೇಕು ಅಷ್ಟರಲ್ಲಿ ಸ್ವರ್ಣಲತಾ, ತಮ್ಮ ತಂಡದೊಂದಿಗೆ ಬಂದು ಹಣವನ್ನು ಸೀಜ್​ ಮಾಡುತ್ತಾರೆ.

ಇನ್ಸ್​ಪೆಕ್ಟರ್​ರಿಂದ ಬೆದರಿಕೆ

ಹಣ ವಶಕ್ಕೆ ಪಡೆದ ಬಳಿಕ ಸ್ವರ್ಣಲತಾ ಅವರ ತಂಡ ಮಧ್ಯವರ್ತಿ ಸೂರಿ ಬಾಬುಗೆ ಥಳಿಸುವುದನ್ನು ನೋಡಿದ ಮಾಜಿ ನೌಕಾಧಿಕಾರಿಗಳು ಅಯ್ಯೋ ನಮ್ಮ ಹಣ ಹೋಯ್ತಲ್ಲ ಅಂತ ಚಿಂತೆಗೀಡಾಗುತ್ತಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡುವುದಾಗಿ ಸ್ವರ್ಣಲತಾ ಬೆದರಿಕೆ ಹಾಕುತ್ತಾರೆ. ಇದರಿಂದ ಹೆದರಿದ ನಿವೃತ್ತ ನೌಕಾಧಿಕಾರಿಗಳು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಒಪ್ಪುತ್ತಾರೆ.

ದೂರು ದಾಖಲು ಬಳಿಕ ಪ್ರಕರಣ ಬೆಳಕಿಗೆ

ಮಾಜಿ ನೌಕಾಧಿಕಾರಿಗಳು ಸ್ಥಳದಿಂದ ಹೋಗುತ್ತಿದ್ದಂತೆ ಇನ್ಸ್​ಪೆಕ್ಟರ್​ ಸ್ವರ್ಣಲತಾ, ಪೊಲೀಸ್​ ಕಾನ್ಸ್​ಟೆಬಲ್​, ಹೋಮ್​ ಗಾರ್ಡ್ಸ್​ ಮತ್ತು ಮಧ್ಯವರ್ತಿ ಹಣವನ್ನು ಹಂಚಿಕೊಳ್ಳುತ್ತಾರೆ. ಇದಾದ ಬಳಿಕ ಸುಮ್ಮನೇ ಇರುವುದು ಬೇಡ ಅಂತಾ ಹಣ ಕಳೆದುಕೊಂಡ ಮಾಜಿ ನೌಕಾಧಿಕಾರಿಗಳು ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net