

ಶಿಮ್ಲಾ: ಹಿಮಾಚಲ ಪ್ರದೇಶವು ತೀವ್ರ ಮಳೆಗಾಲದ ಪ್ರವಾಹ ಮತ್ತು ಭೂಕುಸಿತದಿಂದ ಬಳಲುತ್ತಿದೆ. ಇನ್ನೂ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 37ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ.
ಕೆಲವೆಡೆ ರಸ್ತೆಗಳು ಸಂಪರ್ಕ ಕಡಿತಗೊಂಡಿದೆ. ವಿದ್ಯುತ್, ನೀರು ಸರಬರಾಜು ಸೇರಿದಂತೆ ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ. ರಾಜ್ಯಾದ್ಯಂತ ಸುಮಾರು 250 ರಸ್ತೆಗಳ ಸಂಪರ್ಕ ಬಂದ್ ಆಗಿದೆ. 500ಕ್ಕೂ ಹೆಚ್ಚು ವಿದ್ಯುತ್ ವಿತರಣಾ ಟ್ರಾನ್ಸ್ಫಾರ್ಮರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸುಮಾರು 700 ಕುಡಿಯುವ ನೀರಿನ ಘಟಕಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ನಿರಂತರ ಮಳೆಯಿಂದ ಮಂಡಿ ಜಿಲ್ಲೆಯಲ್ಲಿ ವ್ಯಾಪಕ ನಾಶವಾಗಿದ್ದು, 400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಜುಲೈ 7 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿ, ಭಾರತೀಯ ಹವಾಮಾನ ಇಲಾಖೆ ಶಿಮ್ಲಾ, ಸೋಲನ್, ಸಿರ್ಮೌರ್, ಉನಾ, ಬಿಲಾಸ್ಪುರ್, ಹಮೀರ್ಪುರ್, ಕಾಂಗ್ರಾ, ಚಂಬಾ ಮತ್ತು ಮಂಡಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಹೊರಡಿಸಲಾಗಿದೆ.
(ಏಜೆನ್ಸೀಸ್)
ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ರಾಜ್ಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಪೀಡಿತ ಜನಸಂಖ್ಯೆಗೆ ಪರಿಹಾರ ಒದಗಿಸುವುದು ಮತ್ತು ಹೆಚ್ಚಿನ ಸಾವುನೋವುಗಳನ್ನು ತಡೆಗಟ್ಟುವತ್ತ ಪ್ರಯತ್ನಗಳಲ್ಲಿ ಕಾರ್ಯನಿರತವಾಗಿದೆ. ಅಲ್ಲಿನ ನಿವಾಸಿಗಳು ಜಾಗರೂಕರಾಗಿರಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸಲಹೆಗಳನ್ನು ಅನುಸರಿಸಲು ಒತ್ತಾಯಿಸಲಾಗಿದೆ.
ರಾಜಧಾನಿ ಶಿಮ್ಲಾದಲ್ಲಿ ಶಾಲೆಗಳು ನೀರಿನಿಂದ ಜಲಾವೃತಗೊಂಡಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ಇದರ ಜೊತೆಗೆ ಮನೆಗಳು ಕುಸಿಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದ ಕೆಲವು ಕಡೆಗಳಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಆಡಳಿತ ಮತ್ತು ಪೊಲೀಸರ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿವೆ.