

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಸೋರುತ್ತಿದ್ದ ಆರೋಗ್ಯ ಇಲಾಖೆ ಕಟ್ಟಡವನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖೆಯ ಇಂಜಿನಿಯರನ್ನು ಸ್ಥಳದಲ್ಲೇ ಅಮಾನತುಮಾಡಿ ಮನೆಗೆ ಕಳಿಸಿದ ಪ್ರಕರಣ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ತೀವ್ರ ಚರ್ಚೆಯಾಗುತ್ತಿದೆ.
ಅತಿಯಾದ ಮಳೆ, ಮೂಲಸೌಕರ್ಯ ನಿರ್ವಹಣೆಗೆ ಅನುದಾನ ಕೊರತೆ, ಕಳಪೆ ಕಾಮಗಾರಿ ಹೀಗೆ ಹತ್ತು ಹಲವು ಕಾರಣಗಳಿದ್ದರೂ, ಅಧಿಕಾರಿಯ ಮೇಲೆ ಕ್ರಮ ಕೈಗೊಂಡ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿವೃಂದ ಅಸಮಾಧಾನ ಹೊರಹಾಕಿದೆ. ಅಷ್ಟೇ ಅಲ್ಲದೇ, ಎಷ್ಟು ಜಿಲ್ಲೆಯ ಡಿಎಚ್ಒ ಕಚೇರಿ ಸೋರುತ್ತಿದೆ, ಯಾವೆಲ್ಲ ಆಸ್ಪತ್ರೆಗಳು ಸೋರುತ್ತಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳು ಪಟ್ಟಿ ನೀಡಿದ್ದಾರೆ.
ಜತೆಗೆ ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರದ ಮುಂದಿರುವ ತುರ್ತು ಆದ್ಯತೆಗಳ ಬಗ್ಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕೆಲವು ತಿಂಗಳ ಹಿಂದಷ್ಟೇ ಸರ್ಕಾರಕ್ಕೆ ನೀಡಿರುವ ಸಮೀಕ್ಷಾ ವರದಿಯಲ್ಲಿ ಆರೋಗ್ಯ ಇಲಾಖೆ ಆದ್ಯತೆ ಮೇಲೆ ಕೈಗೊಳ್ಳಬೇಕಾದ ಕೆಲಸಗಳನ್ನು ಪಟ್ಟಿ ಮಾಡಿದ್ದು, ಗ್ಯಾರಂಟಿ ಯೋಜನೆಯಷ್ಟೇ ಅಲ್ಲ, ಈ ವರದಿಯಲ್ಲಿನ ಶಿಫಾರಸನ್ನು ಅನುಷ್ಠಾನ ಮಾಡುವುದರ ಕಡೆಗೂ ಗಮನ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ವರದಿಯಲ್ಲೇನಿದೆ?: ಆರೋಗ್ಯ ಕ್ಷೇತ್ರದ ಮೂಲಸೌಕರ್ಯ, ತಜ್ಞ ಸಂಪನ್ಮೂಲ, ಸಮಸ್ಯೆ ನಿವಾರಣೆ ಸವಾಲು ಹೀಗೆ ಬಹುಮುಖಿಯಾಗಿ ವರದಿಯಲ್ಲಿ ಉಲ್ಲೇಖಗಳಿವೆ. ರಾಜ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದ ಸೌಲಭ್ಯಗಳೊಂದಿಗೆ ಆರೋಗ್ಯ ಕೇಂದ್ರಗಳನ್ನು ರಚಿಸಬೇಕಿದೆ. ಅದನ್ನು ಹೊರತುಪಡಿಸಿ ಈಗಾಗಲೆ ಗುರುತಿಸಲ್ಪಟ್ಟರುವ 245 ನಗರ ಮತ್ತು 202 ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯಿದೆ ಎಂಬ ಸಂಗತಿ ಸರ್ಕಾರದ ಮುಂದಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕೊರತೆ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ ಮತ್ತು ಧಾರವಾಡದಲ್ಲಿ ಹೆಚ್ಚಿದ್ದು, ಅಂದಾಜು ಶೇ.51 ಕೊರತೆ ಹೊಂದಿವೆ ಎಂಬುದು ಮಹತ್ವದ ಸಂಗತಿ. ಸಾಂಕ್ರಾಮಿಕವಲ್ಲದ ರೋಗಗಳ ಪೈಕಿ 94 ತಾಲೂಕುಗಳಲ್ಲಿ ಹೃದಯ ರೋಗ, 71 ತಾಲೂಕುಗಳಲ್ಲಿ ಮೂತ್ರಪಿಂಡದ ಕಾಯಿಲೆ, 70 ತಾಲೂಕುಗಳಲ್ಲಿ ಅಸ್ತಮಾ, 67 ತಾಲೂಕುಗಳಲ್ಲಿ ಕ್ಯಾನ್ಸರ್ ರೋಗಗಳು ಹೊಂದಿರುವ ತಾಲೂಕು ಎಂದು ಗುರುತಿಸಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡಲು ಮತ್ತು ಆರಂಭಿಕ ಹಂತದ ರೋಗ ಗುರುತಿಸಲು, ಸ್ಕ್ರೀನಿಂಗ್ಗೆ ಆದ್ಯತೆ ನೀಡಬೇಕಿದೆ.
ತಾಯಂದಿರ ಮರಣ ದರಕ್ಕೆ ಸಂಬಂಧಿಸಿದಂತೆ 77 ತಾಲೂಕುಗಳನ್ನು ಮಹತ್ವಾಕಾಂಕ್ಷಿ ತಾಲೂಕುಗಳು (ರಾಜ್ಯ ಸರಾಸರಿಗಿಂತ ಹೆಚ್ಚು) ಎಂದು ಗುರುತಿಸಲಾಗಿದೆ. ರಕ್ತಹೀನತೆ ಮತ್ತು ಆರೋಗ್ಯ ಮೂಲಸೌಕರ್ಯ ತಿಳಿಸುವ ನಾಲ್ಕು ರೀತಿಯ ತಪಾಸಣೆ ತೀವ್ರಗೊಳಿಸಬೇಕಿದೆ. 9ರಿಂದ 11 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧ ಚುಚ್ಚುಮದ್ದು ನೀಡಲಾಗುತ್ತದೆ. ಅದಿನ್ನೂ ನಿರೀಕ್ಷಿತ ಗುರಿಮುಟ್ಟಿಲ್ಲ. ಅದರ ಬಗ್ಗೆಯೂ ಗಮನ ಹರಿಸಬೇಕಾಗಿದೆ.
ಉಳಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರಾದೇಶಿಕ ಸೌಲಭ್ಯಗಳನ್ನು ಒಳಗೊಂಡಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಹೈಟೆಕ್ ಮೂಲಸೌಕರ್ಯ ಇದ್ದಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಉತ್ತಮ ಆಸ್ಪತ್ರೆಗಳ ಹುಡುಕಾಟ ನಡೆಸಿ ದೊಡ್ಡ ನಗರಗಳಿಗೆ ತೆರಳದಂತೆ ತಡೆಯಬಹುದೆಂದು ಅಭಿಪ್ರಾಯಪಡಲಾಗಿದೆ. ಆಯುಷ್ವಾನ್ ಭಾರತ್ ಕಾರ್ಯಕ್ರಮದಲ್ಲಿ್ಲ ಮೂಲಸೌಕರ್ಯದ ಸಾಮರ್ಥ್ಯದ ಜತೆಗೆ, ಸಮಗ್ರ ದಾಖಲಾತಿ ಅಗತ್ಯವಿದ್ದು, ಮನೆ ಬಾಗಿಲಿಗೆ ತೆರಳಿ ಅಭಿಯಾನ ನಡೆಸಿ ಡಿಜಿಟಲ್ ಸಾರ್ವತ್ರಿಕ ದಾಖಲಾತಿ ಆಗಬೇಕಾಗಿದೆ. ಇದರಿಂದ ದುರ್ಬಲ ವರ್ಗಕ್ಕೆ ದೊಡ್ಡ ಅನುಕೂಲ ನಿರೀಕ್ಷಿಸಲಾಗಿದೆ.
ಎಲ್ಲ ಹೆರಿಗೆ ಆರೋಗ್ಯ ಸಂಸ್ಥೆಗಳನ್ನು ಸ್ಮಾರ್ಟ್ ಹೆಲ್ತ್ ಕೇರ್ ಕ್ಲಿನಿಕ್ ಮತ್ತು ಆಸ್ಪತ್ರೆಗಳಾಗಿ ಪರಿವರ್ತಿಸಬೇಕಿದೆ. ಈ ಸಂಜೀವಿನಿಯಂತಹ ಟೆಲಿಮೆಡಿಸಿನ್ ಪ್ಲಾಟ್ಫಾಮರ್್ಗಳಿಗೆ ವೈದ್ಯರ ಲಭ್ಯತೆಯನ್ನು ಹೆಚ್ಚಿಸುವುದು ಸೇರಿ ರಾಜ್ಯದ ನರ್ಸ್ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೊಂದಿಸಲು ಸಾರ್ವಜನಿಕ ಮತ್ತು ಖಾಸಗಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಬೆಂಗಳೂರು ನಗರ, ಬೆಳಗಾವಿ, ಮೈಸೂರು, ತುಮಕೂರು, ಹಾಸನ ಮತ್ತು ಮಂಡ್ಯದಲ್ಲಿ ಅಂದಾಜು ಶೇ.39.0 ಕೊರತೆಯನ್ನು ಕಂಡುಕೊಳ್ಳಲಾಗಿದೆ.
ಶೇ.39.1 ಕೊರತೆ: ಲ್ಯಾಬ್ ಟೆಕ್ನಿಷಿಯನ್ ಸಾಕಷ್ಟಿದೆ. ಬೆಂಗಳೂರು ನಗರ, ಶಿವಮೊಗ್ಗ, ಮೈಸೂರು, ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಶೇ.39.1 ಕೊರತೆಯನ್ನು ಗುರುತಿಸಲಾಗಿದ್ದು, ಈ ಅಲ್ಲೆಗಳಿಗೆ ಆದ್ಯತೆ ನೀಡಬೇಕಾಗಿದೆ. ಮಾನ್ಯತೆ ಪಡೆದ ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಸಹಾಯಕ ಆರೋಗ್ಯ ವೃತ್ತಿಪರರು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಹೊಂದಿರುವ ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು, ನರ್ಸ್ ಮತ್ತು ಅಲೈಡ್ ಹೆಲ್ತ್ ವೃತ್ತಿಪರರಿಗೆ ಪ್ಯಾರಾಮೆಡಿಕಲ್ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕಿದೆ. ರೋಗಿಗಳ ಅಂಕಿಅಂಶ, ಔಷಧ ಮತ್ತು ಸಲಕರಣೆಗಳ ದಾಸ್ತಾನು ಖಾತೆಗಳನ್ನು ಮೇಲ್ವಿಚಾರಣೆ ಮಾಡಲು ಡಿಜಿಟಲ್ ಕಂಟ್ರೋಲ್ ಟವರ್ ಸ್ಥಾಪಿಸುವುದು ಮತ್ತು ಆರೋಗ್ಯ ಸೌಲಭ್ಯಗಳ ವಿವರಗಳನ್ನು ಎಲೆಕ್ಟ್ರಾನಿಕ್ ದಾಖಲೆಗಳ ಮೂಲಕ ಆರೋಗ್ಯ ಸಿಬ್ಬಂದಿಯಿಂದ ನಿರ್ವಹಿಸಲ್ಪಡಬೇಕಿದೆ. ಇದರಿಂದ ಸಮಗ್ರ ಆರೋಗ್ಯ ವ್ಯವಸ್ಥೆ ಮೇಲೆ ಗಮನ ನೀಡಲು ಸಾಧ್ಯವಾಗಲಿದೆ. ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜೋಡಿಸುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಈ ಆಸ್ಪತ್ರೆಗಳಗೆ ಭೇಟಿ ನೀಡಿ ಅಗತ್ಯುವಿರುವ ಆರೋಗ್ಯ ಸೇವೆ ಒದಗಿಸಬಹುದು. ಇದರಿಂದ ಜನರಿಗೆ ಸಾಕಷ್ಟು ಅನುಕೂಲವೂ ಆಗಲಿದೆ.
ಶಿಶು ಮರಣದ ಪ್ರಮುಖ ಕಾರಣಗಳು ಅವಧಿಪೂರ್ವ ಪ್ರಸವ ಮತ್ತು ಕಡಿಮೆ ತೂಕ ಇದರೊಂದಿಗೆ ನ್ಯುಮೋನಿಯಾ, ಹೃದ್ರೋಗ ಮತ್ತು ಜನನ ಸಮಯದಲ್ಲಿ ಉಸಿರುಗಟ್ಟುವಿಕೆಗಳೂ ಸಹ ಶಿಶು ಮರಣಕ್ಕೆ ಪ್ರಮುಖ ಕಾರಣವಾಗಿದೆ. 2022-23ರಲ್ಲಿ (ನವೆಂಬರ್ ವರೆಗೆ) 6119 ಶಿಶು ಮರಣಗಳು ಸಂಭವಿಸಿವೆ. ಅದರಲ್ಲಿ 235 ಸಾವುಗಳು ನ್ಯೂಮೊನಿಯಾ, 38 ಅತಿಸಾರ, 1000 ನವಜಾತ ಸೋಂಕುಗಳು (ಸೆಪ್ಸಿಸ್) (0-1 ತಿಂಗಳು) ಮತ್ತು 1456 ಜನನ ಸಮಯದಲ್ಲಿ ಉಸಿರುಗಟ್ಟುವಿಕೆ ಮತ್ತು ಅಸ್ಪಿಕ್ಸಿಯಾ (0-1). ಉಳಿದ 3390 ಮರಣಗಳು ಇತರೆ ಕಾರಣಗಳಿಂದಾಗಿದೆ. 2022-23ರಲ್ಲಿ (ನವೆಂಬರ್ವರೆಗೆ) 482 ಸಾವುಗಳಾಗಿದ್ದು, 76 ಸಾವುಗಳು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ, 72 ಪ್ರಸವಾನಂತರದ ರಕ್ತಸ್ರಾವ, 16 ಅಡಚಣೆಯಾದ ಹೆರಿಗೆಯಿಂದ, 3 ಗರ್ಭಪಾತದಿಂದ, 7 ಸೆಪ್ಸಿಸ್, 308 ಅಧಿಕ ಜ್ವರ ಮತ್ತು ಇತರೆ ಕಾರಣಗಳಿಂದ ಉಳಿದ ಸಾವುಗಳಾಗಿವೆ.