1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು

KSRP
Published on

ಬೆಂಗಳೂರು: ನ್ಯಾಯಯುತವಾಗಿ ಸಿಗಬೇಕಾಗಿರುವ ರಜೆಯನ್ನು ಪಡೆಯಲೂ ಸಹ ಲಂಚ ನೀಡಬೇಕಾಗಿದೆ ಮತ್ತು ಇಷ್ಟ ಬಂದ ಕಡೆ ಡ್ಯೂಟಿ ಹಾಕಿಸಿಕೊಳ್ಳಲು ಸಹ ಹಣ ನೀಡಬೇಕಾಗಿದೆ ಎಂದು ಕೆಎಸ್​ಆರ್​ಪಿಯ ಹೆಡ್ ಕಾನ್ಸ್​ಟೆಬಲ್ ಒಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕೂಡ್ಲು ಬಳಿಯಿರುವ 9ನೇ ಬ್ಯಾಚ್ ಕೆಎಸ್ಆರ್​ಪಿ ಹಿರಿಯ ಅಧಿಕಾರಿಗಳಾದ ಎಸಿ 1 ಮುಪ್ಪಣ್ಣ, ಎಸಿ 2 ಚಂದ್ರಶೇಖರ್, ಆರ್​ಪಿಐ ರವಿ, ಆರ್​ಎಸ್​ಐ ಮಹಂತೇಶ್ ಬನ್ನಪ್ಪ ಗೌಡರ್, ಆರ್​ಎಸ್​ಐ ಇರ್ಫಾನ್​ ನದಾಫ್​, ಆರ್​ಎಸ್​ಐ ಶಂಭುಲಿಂಗ ಎಸ್​. ಕಣ್ಣೂರು ವಿರುದ್ಧ ಹೆಡ್ ಕಾನ್ಸ್​ಟೆಬಲ್ ಓಂಕಾರಪ್ಪ ಅವರು ಕೆಎಸ್ಆರ್​ಪಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.

ದೂರಿನ ಸಾರಾಂಶ ಈ ಕೆಳಕಂಡತಿದೆ.

9ನೇ ಪಡೆ ಕೆಎಸ್​ಆರ್​ಪಿಯ ಎಸಿ-1 ಮುಪ್ಪಣ್ಣ ಮತ್ತು ಆರ್​ಪಿಐ ರವಿ ಅವರು ಸಿಬ್ಬಂದಿಯಿಂದ ಒಂದು ದಿನಕ್ಕೆ 500 ರೂಪಾಯಿಗಳಂತೆ ಹಣ ಪಡೆದು ರಜೆ ನೀಡುತ್ತಿದ್ದಾರೆ. 3 ರಿಂದ 10 ದಿನಗಳವರೆಗೆ ಲಂಚ ಪಡೆದು ರಜೆಗೆ ಅನುಮತಿ ನೀಡುತ್ತಿದ್ದಾರೆ. ಇವರು ಐದಾರು ಮಧ್ಯವರ್ತಿಗಳನ್ನು ಇಟ್ಟುಕೊಂಡು ಹಣ ಪಡೆಯುತ್ತಿರುತ್ತಾರೆ. ನಾನು ಓರ್ವ ಮಧ್ಯವರ್ತಿಯಾದ ಎಆರ್​ಎಸ್ಐ ಬ್ಯಾಂಡ್ ಗೋವಿಂದ್​ಗೆ ದೂರವಾಣಿ ಕರೆ ಮಾಡಿ 5 ದಿನ ರಜೆಗೆ ಆರ್​ಪಿಐ ರವಿ ಅಥವಾ ಎಸಿ-1 ಮುಪ್ಪಣ್ಣರಿಂದ ಅನುಮತಿ ಕೊಡಿಸಿ, 500 ರೂಪಾಯಿ ಕೊಡಲು ಸಿದ್ಧನಿದ್ದೇನೆ ಎಂದು ಕೇಳಿದಾಗ ಓಕೆ ಎಂದರು. ಬಳಿಕ ಫೋನ್ ಪೇ ಅಕೌಂಟ್‌ಗೆ ಹಣ ಹಾಕಿ ಎಂದು ಗೋವಿಂದ್​ ಕೇಳಿದರು. 9ನೇ ಪಡೆ ಕೆಎಸ್​ಆರ್​ಪಿಯಲ್ಲಿ ಹಣ ನೀಡಿ ಎಷ್ಟು ದಿನ ಬೇಕಾದರೂ ರಜೆ ಪಡೆಯಬಹುದು. ಇದಕ್ಕೆ ಸಂಬಂಧಿಸಿದ ಆಡಿಯೋ ಸಂಭಾಷಣೆ ನನ್ನ ಮೊಬೈಲಿನಲ್ಲಿ ರೆಕಾರ್ಡ್ ಆಗಿದ್ದು, ಇಲಾಖೆಯ ವಿಚಾರಣಾ ಸಂದರ್ಭದಲ್ಲಿ ಒದಗಿಸಲು ಸಿದ್ಧನಿರುತ್ತೇನೆ ಓಂಕಾರಪ್ಪ ಹೇಳಿದ್ದಾರೆ.

ಲಕ್ಷಾಂತರ ರೂಪಾಯಿ ವಸೂಲಿ

ಈಗಾಗಲೇ ರವಿ ಮತ್ತು ಮುಪ್ಪಣ್ಣ ಸಿಬ್ಬಂದಿಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಮಧ್ಯವರ್ತಿಗಳಿಂದ ಮತ್ತು ನೇರವಾಗಿ ಫೋನ್ ಪೇ, ಗೂಗಲ್ ಪೇ ಮುಖಾಂತರ ಪಡೆದಿರುವುದು ಕೇಳಿ ಬಂದಿದೆ. ಇಲಾಖೆಯು ವಿಚಾರಣೆ ನಡೆಸುವುದರಿಂದ ಸತ್ಯಾಂಶವು ಹೊರಬರುತ್ತದೆ. ಮುಪ್ಪಣ್ಣ ಮತ್ತು ರವಿ ತಮ್ಮ ಮನೆಯಲ್ಲಿ ಇರುವ ಆರ್ಡರ್ಲಿಗಳನ್ನು ಪ್ರತಿ ತಿಂಗಳಿಗೆ 20,000 ರೂ. ಪಡೆದು ಅವರ ಸ್ವಂತ ಊರುಗಳಲ್ಲಿ ವಾಸವಿರಲು ಕಳಿಸಿರುವ ಆರೋಪವು ಕೇಳಿ ಬಂದಿದೆ.

ಸ್ಥಳದಲ್ಲಿ ಇರುವುದಿಲ್ಲ

ಡೇ ಡ್ಯೂಟಿ ಮತ್ತು ನೈಟ್​ ಡ್ಯೂಟಿ ಕರ್ತವ್ಯ, ವಾಹನ ನಿಲುಗಡೆ ಕರ್ತವ್ಯದಲ್ಲಿ ಆರ್​ಎಸ್‌ಐ ಮಹಂತೇಶ್ ಬಸಪ್ಪಗೌಡ‌, ಇರ್ಫಾನ್ ನದಾಫ್ ಹಾಗೂ ಶಂಭುಲಿಂಗ ಎಸ್‌. ಕಣ್ಣೂ‌ರು ಅವರು ತುಕಡಿಯ ಜೊತೆಯಲ್ಲಿ ನಿಯೋಜನೆಗೊಂಡ ಸ್ಥಳಕ್ಕೆ ಬರುವುದಿಲ್ಲ. ಬದಲಾಗಿ ತುಕಡಿಯ ಎಆರ್​ಎಸ್ಐ ಅಥವಾ ಎಚ್​​ಸಿ ಅವರಿಗೆ ದೂರವಾಣಿ ಮುಖಾಂತರ ತುಕಡಿಯನ್ನು ತೆಗೆದುಕೊಂಡು ಹೋಗಲು ಸೂಚಿಸುತ್ತಾರೆ ಮತ್ತು ತುಕಡಿಯ ಫೋಟೋ ತೆಗೆಯುವ ಪದ್ಧತಿ ಇದ್ದು, ತುಕಡಿಯನ್ನು ಫಾಲಿನ್ ಮಾಡಿಸಿ ಒಂದು ನಿಮಿಷ ಫೋಟೋ ತೆಗೆಯುವ ಸಮಯದಲ್ಲಿ ಮಾತ್ರ ತುಕಡಿಯ ಹತ್ತಿರವಿದ್ದು ಹೋಗುತ್ತಾರೆ ಎಂದು ಓಂಕಾರಪ್ಪ ದೂರಿದ್ದಾರೆ.

10 ಸಾವಿರ ರೂ. ಲಂಚ

ಕ್ಯಾಂಟೀನ್, ಜಿಮ್, ಬೇಕರಿ, ಲೈಬ್ರರಿ, ಟೆನ್ನಿಸ್ ಕೋರ್ಟ್ ಇತ್ಯಾದಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಿಂದ ಪ್ರತಿ ತಿಂಗಳು ಸುಮಾರು 10,000 ರೂಪಾಯಿಗಳನ್ನು ಮುಪ್ಪಣ್ಣ ಮತ್ತು ರವಿ ಅವರು ಪಡೆದುಕೊಳ್ಳುತ್ತಿರುವ ಬಗ್ಗೆ ಆರೋಪ ಕೇಳಿಬಂದಿರುತ್ತದೆ. ಇಲಾಖೆಯು ವಿಚಾರಣೆ ನಡೆಸುವುದರಿಂದ ಸತ್ಯವು ಹೊರಬರಲಿದೆ. ಸೆಂಟ್ರಲ್ ಪಿಟಿಕ್‌ನಲ್ಲಿ ಕೆಲವು ಸಿಬ್ಬಂದಿ ಸರ್ಕಾರಿ ವಾಹನದಲ್ಲಿ ಜಲ್ಲಿಕಲ್ಲು ಮತ್ತು ಕಲ್ಲುಚಪ್ಪಡಿ ಇತ್ಯಾದಿ ಸಾಮಗ್ರಿಗಳನ್ನು ರಾತ್ರಿ ಸಮಯದಲ್ಲಿ ಕದ್ದುತರುತ್ತಿದ್ದ ಬಗ್ಗೆ ಆರೋಪವು ಸಹ ಕೇಳಿ ಬಂದಿರುತ್ತದೆ. ಇಲಾಖಾ ವಿಚಾರಣೆ ನಡೆಸುವುದರಿಂದ ಸತ್ಯವು ಹೊರಬರುತ್ತದೆ.

ಒಟ್ಟಾರೆ ಪಡೆಯಲ್ಲಿ ಲಂಚಕ್ಕೆ ಒತ್ತಾಯಿಸಲು ಸಿಬ್ಬಂದಿಯವರಿಗೆ ತೀವ್ರ ಕಿರುಕುಳ ನೀಡುತ್ತಿರುವುದು ಕಂಡುಬಂದಿರುತ್ತದೆ. ಈ ಮೇಲ್ಕಂಡ ಎಲ್ಲ ಆರೋಪಗಳಿಗೆ ಇಲಾಖೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಓಕಾಂರಪ್ಪ ಮನವಿ ಮಾಡಿಕೊಂಡಿದ್ದಾರೆ. ಇಲಾಖೆಯ ವಿಚಾರಣೆಗೆ ನಾನು ಸಹ ಸಂಪೂರ್ಣ ಸಹಕರಿಸಲು ಸಿದ್ದನಿರುತ್ತೇನೆ ಎಂದು ಓಂಕಾರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net