

ತಮಿಳುನಾಡು: ಕಾಲಿವುಡ್ ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರ ಜನ್ಮದಿನದಂದೇ 'ಕಂಗುವ' ಚಿತ್ರದ ಪ್ರಥಮ ಗ್ಲಿಂಪ್ಸ್ ವಿಡಿಯೋ ಬಿಡುಗಡೆಗೊಳಿಸುವ ಮುಖೇನ ಚಿತ್ರತಂಡ ಸೂರ್ಯಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ನಟ ಸೂರ್ಯ ಅವರ ಬಹುನಿರೀಕ್ಷಿತ 'ಕಂಗುವ' ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತು ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರದ ಮೊದಲ ಝುಲಕ್ ವಿಡಿಯೋ ಜತೆಗೆ ಸೂರ್ಯ ಹುಟ್ಟುಹಬ್ಬ ಎರಡೂ ಒಂದೇ ದಿನ ಬಂದಿರುವುದು ಹೆಚ್ಚಿನ ಸಂತಸ ತಂದಿದೆ. ಕಂಗುವ ಚಿತ್ರದ ತಯಾರಕರು ಬಿಡುಗಡೆಗೊಳಿಸಿದ ಗ್ಲಿಂಪ್ಸ್ ತುಣುಕನ್ನು ನೋಡಿದ ಫ್ಯಾನ್ಸ್, ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ, ವಿಭಿನ್ನ ಲುಕ್ನಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬುದನ್ನು ಈಗಾಗಲೇ ದೃಶ್ಯದಲ್ಲಿ ಕಣ್ತುಂಬಿಕೊಂಡಿದ್ದಾರೆ.
ಸೂರ್ಯ ಅವರ ಪಾತ್ರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಮತ್ತು ಸೂರ್ಯಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಈ ಮಧ್ಯೆ ಸೂರ್ಯ ಅವರ ಜನ್ಮದಿನದಂದೇ ವಿಡಿಯೋ ಬಿಡುಗಡೆಗೊಳಿಸಿದ್ದಕ್ಕೆ ಭಾರೀ ಖುಷಿ ವ್ಯಕ್ತಪಡಿಸಿರುವ ಫ್ಯಾನ್ಸ್, ಅವರ ಹುಟ್ಟುಹಬ್ಬಕ್ಕೆ ಇದಕ್ಕಿಂತ ಉತ್ತಮ ಉಡುಗೊರೆ ಮತ್ತೊಂದಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).