SSLC ಫೇಲಾದ ಬಳಿಕ ಕೃಷಿಯತ್ತ ಮುಖ: ಕೈಹಿಡಿದ ಟೊಮ್ಯಾಟೋ, ಒಂದೇ ತಿಂಗಳಲ್ಲಿ 1.8 ಕೋಟಿ ರೂ. ಲಾಭ

Andhra Farmer
Published on

ಹೈದರಾಬಾದ್​: ಸೋಲು ಜೀವನದ ಅಂತ್ಯವಲ್ಲ ಎಂಬುದನ್ನು ತೆಲಂಗಾಣದ ರೈತ ಬಿ. ಮಹಿಪಾಲ್ ರೆಡ್ಡಿ ಸಾಬೀತುಪಡಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ಬಳಿಕ ಕೃಷಿಯತ್ತ ಮುಖ ಮಾಡಿದ ಮಹಿಪಾಲ್​, ಇದೀಗ ತಮ್ಮ ಪರಿಶ್ರಮದಿಂದ ಟೊಮ್ಯಾಟೋ ಬೆಳೆದು ಕೇವಲ ಒಂದು ತಿಂಗಳಲ್ಲಿ 1.8 ಕೋಟಿ ರೂ. ಲಾಭ ಮಾಡಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದಲ್ಲಿ ಟೊಮ್ಯಾಟೋ ಕೊರತೆಯಿಂದ ಬೆಲೆ ಗಗನಕ್ಕೇರಿದೆ. ಇದು ಮಹಿಪಾಲ್​ಗೆ ವರವಾಗಿ ಪರಿಣಮಿಸಿದ್ದು, ಟೊಮ್ಯಾಟೋ ಬೆಳೆಯಿಂದ ಕೋಟ್ಯಧಿಪತಿಯಾಗಿದ್ದಾನೆ. ಟೊಮ್ಯಾಟೋಗೆ ಭಾರೀ ಬೇಡಿಕೆ ಇದ್ದು, ಹೈದರಾಬಾದ್​ ಮಾರುಕಟ್ಟೆಯಲ್ಲಿ ಕೆಜಿ 100 ರೂ.ನಂತೆ ಮಾರಾಟವಾಗುತ್ತಿದೆ.

ಮಹಿಪಾಲ್​ ಅವರು ತಮ್ಮ 8 ಎಕರೆ ತೋಟದಲ್ಲಿ ಟೊಮ್ಯಾಟೋ ಕೃಷಿ ಮಾಡಿದ ಸಮಯದಲ್ಲೇ ದೇಶದಲ್ಲಿ ಟೊಮ್ಯಾಟೋ ಬಿಕ್ಕಟ್ಟು ತಲೆದೂರಿರುವುದು ಮಹಿಪಾಲ್​ಗೆ ಲಾಭವಾಗಿ ಪರಿಣಮಿಸಿದೆ. ಏಪ್ರಿಲ್​ 15ರಂದು ಟೊಮ್ಯಾಟೋ ಬೆಳೆಯಲು ಆರಂಭಿಸಿದ ಮಹಿಪಾಲ್​, ಜೂನ್​ 15ರಂದು ಬೆಳೆ ಮಾರಾಟ ಮಾಡಲು ಶುರು ಮಾಡಿದರು.

ಅನಿರೀಕ್ಷಿತ ಮಳೆಯಿಂದಾಗಿ ಎಂಟು ಎಕರೆಯಲ್ಲಿ ಬೆಳೆದಿದ್ದ ಬೆಳೆಯಲ್ಲಿ ಕೆಲವು ಬೆಳೆ ನಷ್ಟವಾದ ಕಾರಣ ಮಹಿಪಾಲ್​ಗೆ ಆತಂಕವೂ ಕಾಡಿತ್ತು. ಆದರೆ, 40 ರಷ್ಟು ಬೆಳೆಗಳು ಇನ್ನೂ ಹಾಳಾಗದಿರುವುದರಿಂದ ಈ ಋತುವಿನಲ್ಲಿ ಅವರ ಆದಾಯವು 2 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ಹೇಳಿದ್ದಾರೆ.

ಈ ವರ್ಷ ಅವರು ಟೊಮ್ಯಾಟೋ ಕೃಷಿ ಮಾಡಲು ಪ್ರತಿ ಎಕರೆಗೆ ಸುಮಾರು ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಇದೀಗ ಉತ್ತಮ ಇಳುವರಿ ಬಂದಿದ್ದು, ಅವರು ಶ್ರಮ ಫಲಪ್ರದವಾಗಿದೆ. ಈವರೆಗೂ 7,000 ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿರುವ ಮಹಿಪಾಲ್​ ಒಂದೇ ತಿಂಗಳಲ್ಲಿ 1.8 ಕೋಟಿ ರೂ. ಸಂಪಾದನೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net