ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳಲು VRS ತೆಗೆದುಕೊಂಡ ಪತಿ; ಆದರೆ ವಿಧಿಯಾಟವೇ ಬೇರೆಯಾಗಿತ್ತು

Kota Death
Published on

ಕೋಟಾ: ಪತ್ನಿಯ ಅನಾರೋಗ್ಯದಿಂದ ಬಳಲುತ್ತಿದ್ದದ್ದನ್ನು ಕಂಡು ಪತಿಯು ಆಕೆಯನ್ನು ನೋಡಿಕೊಳ್ಳುವ ಸಲುವಾಗಿಯೇ ತಮ್ಮ ಕೆಲಸದಿಂದ ಸ್ವಯಂನಿವೃತ್ತಿ (VRS) ಪಡೆಯಲು ನಿರ್ಧರಿಸುತ್ತಾರೆ. ಗಂಡನ ನಿರ್ಧಾರ ಇದಾದರೆ ವಿಧಿಯಾಟವೇ ಬೇರೆಯಾಗಿತ್ತು. ಪತ್ನಿಯ ಸೇವೆ ಮಾಡಲು ಕೆಲಸ ಬಿಡಲು ತೀರ್ಮಾನಿಸಿದ ಅವರ ಆಲೋಚನೆಯನ್ನು ಸಹದ್ಯೋಗಿಗಳು ಮೆಚ್ಚಿದ್ದರು. ಅವರ ಕೆಲಸದ ಕೊನೆಯ ದಿನ ಸಹೋದ್ಯೋಗಿಗಳು ಸೆಂಡಾಫ್​ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅದೇ ದಿನ ಪತಿಯ ಬೀಳ್ಕೊಡುಗೆ ಸಮಾರಂಭದಲ್ಲೇ ಪತ್ನಿಯು ಮೃತಪಟ್ಟಿದ್ದಾರೆ.

ಘಟನೆಯು ರಾಜಸ್ಥಾನದ ಕೋಟಾದಲ್ಲಿ ನಡೆದಿದ್ದು, ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ದೇವೇಂದ್ರ ಸಂಡಲ್​ ಅವರು ತಮ್ಮ ಪತ್ನಿ ಟೀನಾರನ್ನು ನೋಡಿಕೊಳ್ಳುವ ಸಲುವಾಗಿ ಮೂರು ವರ್ಷ ಮುಂಚಿತವಾಗಿ ನಿವೃತ್ತಿಯಾಗಲು ನಿರ್ಧರಿಸಿದರು. ಆದರೆ, ಸೆಂಡಾಫ್​ ಪಾರ್ಟಿಯಲ್ಲಿ ದೇವೇಂದ್ರ ಅವರ ಪತ್ನಿ ಟೀನಾ ಮೃತಪಟ್ಟಿದ್ದು, ಕೊನೆಯೆ ಕ್ಷಣದ ಮನಕಲುಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಸೆಂಡ್​ಆಫ್​ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಟೀನಾ ನನಗೆ ತಲೆತಿರುಗುತ್ತಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪತಿ ದೇವೇಂದ್ರ ಕೂಡಲೇ ಅವರನ್ನು ಕೂರಿಸಿ ಗಾಳಿ ಬೀಸಲು ಶುರು ಮಾಡುತ್ತಾರೆ. ಬಳಿಕ ನೀರನ್ನು ತರುವಂತೆ ಸೂಚಿಸುತ್ತಾರೆ. ಈ ವೇಳೆ ಫೋಟೋಗೆ ಪೋಸ್​ ಕೊಡುವ ಟೀನಾ ತಕ್ಷಣವೇ ಕುಸಿದು ಬೀಳುತ್ತಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು ವೈದ್ಯರು ಟೀನಾ ಮೃತಪಟ್ಟಿರುವುದಾಗಿ ಘೋಷಿಸುತ್ತಾರೆ.

ಸದ್ಯ ಈ ಮನಕಲುಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಸಂತಾಪ ಸೂಚಿಸಿ ಕಮೆಂಟ್​ ಹಾಕಿದ್ದಾರೆ. ಪತಿಯ ಬೀಳ್ಕೊಡುಗೆ ಸಮಾರಂಭದಲ್ಲೇ ಈ ರೀತಿಯಾಗಿರುವುದು ದುರಾದೃಷ್ಟಕರ ಎಂದು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net