BJP MLA ಮುನಿರತ್ನ ಮೇಲೆ ದಾಳಿ; ಮೂವರು ಅರೆಸ್ಟ್​, ಮಾಡಿದ್ದುಣ್ಣೋ ಮಹಾರಾಯ ಎಂದ ಕುಸುಮಾ ರವಿ

Kusuma Munirathna
Published on

ಬೆಂಗಳೂರು: ರಾಜಾರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜಾರಾಜೇಶ್ವರಿನಗರ ಕ್ಷೇತ್ರದ ಲಕ್ಷ್ಮೀದೇವಿ ನಗರದಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ಕೆಸರೆರಚಾಟಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ಡಿಕೆ ಶಿವಕುಮಾರ್​, ಕುಸುಮಾ ರವಿ ವಿರುದ್ಧ ಮುನಿರತ್ನ ಕೊಲೆ ಆರೋಪ ಮಾಡಿದ್ದಾರೆ.

ಘಟನೆ ಬಳಿಕ ಮಾತನಾಡಿದ ಮುನಿರತ್ನ (BJP MLA), ನನ್ನನ್ನು ಕೊಲೆ ಮಾಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸುರೇಶ್ ಯತ್ನಿಸುತ್ತಿದ್ದಾರೆ. ನನ್ನನ್ನು ಮುಗಿಸಲು ಸುಮಾರು 150 ಜನರನ್ನು ಕರೆಸಿದ್ದಾರೆ. ನನ್ನ ಶರ್ಟ್​ ಹರಿದು ಹಾಕಿದರೆ 20 ಲಕ್ಷ ರೂ., ಮಸಿ ಬಳಿದರೆ 10 ಲಕ್ಷ ರೂ. ಹೀಗೆ ಒಂದೊಂದು ರೀತಿ ರೇಟ್​ ಫಿಕ್ಸ್ ಮಾಡಿದ್ದಾರೆ. ನನ್ನ ಬೆಂಬಲಿಗರು ಮತ್ತು ಪೊಲೀಸರು ಇಲ್ಲದಿದ್ದರೆ ನನ್ನನ್ನು ಹತ್ಯೆ ಮಾಡುತ್ತಿದ್ದರು. ಡಿಕೆ ಶಿವಕುಮಾರ್, ಡಿಕೆ ಸುರೇಶ್, ಹನುಮಂತರಾಯಪ್ಪ ಸೇರಿದಂತೆ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Munirathna

ಮಾಡಿದ್ದುಣ್ಣೋ ಮಹಾರಾಯ ಎಂದ ಕುಸುಮಾ 

ಈ ಬಗ್ಗೆ ಪೋಸ್ಟ್​ ಮಾಡಿರುವ ಕಾಂಗ್ರೆಸ್​ ನಾಯಕಿ ಕುಸುಮಾ ರವಿ, ಮೊಟ್ಟೆ ಅಟ್ಯಾಕ್​ ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಮುನಿರತ್ನ ಅವರದ್ದೇ, ದಲಿತರನ್ನು ತುಚ್ಚವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ FSL ರಿಪೋರ್ಟ್‌ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ತರಹೇವಾರಿ ನಾಟಕಗಳು ಶುರುವಾಗಿದೆ.

ಜನರೆದುರು ತನ್ನ ನಿಜರೂಪ ಬೆತ್ತಲಾದ ನಂತರ ಸಿಂಪತಿ ಗಿಟ್ಟಿಸಿಕೊಳ್ಳಲು ಇಮೇಜ್ ಬಿಲ್ಡಿಂಗ್ ಭಾಗವೇ ಇಂದಿನ ಪ್ರಹಸನ. ಮುನಿರತ್ನ ಸ್ಟೋರಿಗಳು ಅಲ್ಪ ವಿರಾಮದ ಬಳಿಕ ಮತ್ತೆ ಚಾಲ್ತಿಗೆ ಬಂದಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆಯೇ ಕಡಿಮೆ ಇಂತಹ ಸನ್ನಿವೇಶದಲ್ಲಿ ಸ್ವಚ್ಚ ರಾಜಕಾರಣದ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕನಸುಗಳಿಗೆ ಬೆಲೆಯಿಲ್ಲವೆನಿಸುತ್ತದೆ. ಈ ನಾಟಕಗಳನ್ನು ಗಮನಿಸಿದರೆ ಕೊಚ್ಚೆಯಲ್ಲಿ ಹೊರಳಾಡುವ ಹಂದಿಯ ಜೊತೆ ಹಂದಿಗಳಾಗಿಯೇ ಇರಬೇಕಾ ಎಂಬ ಪ್ರಶ್ನೆಯ ಜೊತೆ ಅಸಹ್ಯ ಮೂಡುತ್ತಿದೆ.

ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈತನ ಪಾಪದ ಕೆಲಸಗಳಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ, ಆದರೆ ತನ್ನ ತಪ್ಪು ಮುಚ್ಚಿಕೊಳ್ಳಲು ನನ್ನ ಹೆಸರನ್ನು ವಿನಾಕಾರಣ ಎಳೆದು ತರುವುದು ಎಷ್ಟು ಸರಿ? ಇಂದಿನ ಪ್ರಹಸನದ ಹಿಂದಿನ ದುರುದ್ದೇಶಗಳನ್ನು ಅರಿಯದೆ ಈತನ ಕತೆಗಳನ್ನು ನಂಬುವಷ್ಟು ನಮ್ಮ ಜನರು ದಡ್ಡರೂ, ಮೂರ್ಖರೂ ಅಲ್ಲ. ಕಾಲಾಯ ತಸ್ಮೈ ನಮಃ! ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net