

ನವದೆಹಲಿ: ಟ್ವಿಟರ್ ಬಳಕೆದಾರರೊಬ್ಬರು ಇತ್ತೀಚೆಗಷ್ಟೇ ತಮಗಾದ ವಿಚಿತ್ರ ಆನ್ಲೈನ್ ಶಾಪಿಂಗ್ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಜೋಶ್ ಸಾಫ್ಟ್ವೇರ್ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕರಾಗಿರುವ ಗೌತಮ್ ರೇಜ್ ಇತ್ತೀಚೆಗಷ್ಟೇ ಅಮೇಜಾನ್ ಆನ್ಲೈನ್ ಶಾಪಿಂಗ್ನಲ್ಲಿ 300 ರೂ. ಬೆಲೆಯ ಸ್ಕಿನ್ ಲೋಷನ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರು ಪಡೆದಿದ್ದು 19 ಸಾವಿರ ರೂ. ಮೌಲ್ಯದ ಬೋಸ್ ಕಂಪನಿಯ ಹೆಡ್ಫೋನ್.
ಈ ಬಗ್ಗೆ ತಿಳಿಯಲು ಹಾಗೂ ವಾಪಸ್ ನೀಡಲು ರೇಜ್ ಅವರು ಅಮೇಜಾನ್ ಕಸ್ಟಮರ್ ಕೇರ್ ಸಂಪರ್ಕಿಸಿದಾಗ, ಐಟಮ್ ಅನ್ನು ಮರುಪಡೆಯಲು ಸಾಧ್ಯವಿಲ್ಲ, ನೀವೆ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಈ ವಿಚಾರವನ್ನು ರೇಜ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿದೆ ಉತ್ತರ
ರೇಜ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರೊಬ್ಬರು ಸ್ಕಿನ್ ಲೋಷನ್ ಇನ್ನು ಸ್ಟಾಕ್ನಲ್ಲೇ ಉಳಿದಿದೆಯೇ? ನನಗೊಂದು ಲಿಂಕ್ ಕಳುಹಿಸಿ ಎಂದು ಕೇಳಿದ್ದಾರೆ. ನಾನು ಸ್ಕಿನ್ ಲೋಷನ್ ಪಡೆದಿದ್ದೇನೆ ಎಕ್ಸ್ಚೇಂಜ್ ಮಾಡಿಕೊಳ್ಳೋಣವಾ ಎಂದು ಮತ್ತೋರ್ವ ನೆಟ್ಟಿಗ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಸದ್ಯ ರೇಜ್ ಅವರ ಟ್ವೀಟ್ ವೈರಲ್ ಆಗಿದ್ದು, 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 1500ಕ್ಕೂ ಹೆಚ್ಚು ರೀಟ್ವೀಟ್ ಪಡೆದುಕೊಂಡಿದೆ. ಅನೇಕರು ಎಂಥಾ ಅದೃಷ್ಟ ಎಂದು ಹುಬ್ಬೇರಿಸಿದ್ದಾರೆ. ಮತ್ತೆ ಕೆಲವರು ಆರ್ಡರ್ ಅದಲುಬದಲಾಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)