

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ತಮ್ಮ ತಂದೆ ದಿವಂಗತ ಡಾ.ರಾಜ್ಕುಮಾರ್ ಹುಟ್ಟಿದೂರಾದ ಗಾಜನೂರಿನೊಂದಿಗೆ ಅನ್ಯೋನ್ಯವಾದ ನಂಟು ಇಟ್ಟುಕೊಂಡಿದ್ದರು. ಗಾಜನೂರಿಗೆ ಬಂದರೆ ತಮಗಿಷ್ಟವಾದ ಅಡುಗೆ ಮಾಡಿಸಿಕೊಂಡು ಊಟ ಮಾಡುತ್ತಿದ್ದರು ಎಂದು ಗಾಜನೂರಿನ ಡಾ.ರಾಜ್ ಮನೆಯ ಅಡುಗೆ ಕೆಲಸದವರು ಅವರನ್ನು ಸ್ಮರಿಸಿದ್ದಾರೆ.
ಪುನೀತ್ಗೆ ಗಾಜನೂರಿನ ಮನೆಯ ನಾಟಿ ಕೋಳಿ ಸಾಂಬಾರ್ ಮತ್ತು ಮಟನ್ ಫ್ರೈ ಎಂದರೆ ಪಂಚಪ್ರಾಣ ಆಗಿತ್ತು. ಬಂದಾಗಲೆಲ್ಲ ತಮಗಿಷ್ಟದ ಈ ಅಡುಗೆಗಳನ್ನು ಮಾಡಿಸಿಕೊಂಡು ಊಟ ಮಾಡುತ್ತಿದ್ದರು. ಅಡುಗೆಯವರೊಂದಿಗೆ, ಮನೆಕೆಲಸದವರೊಂದಿಗೆ ತಮಾಷೆ ಮಾಡುತ್ತಾ ಆತ್ಮೀಯವಾಗಿ ಬೆರೆಯುತ್ತಿದ್ದರು ಎಂದು ಮನೆಯವರು ನೆನೆದಿದ್ದಾರೆ.
ಇತ್ತೀಚೆಗೆ ಗಾಜನೂರಿಗೆ ಬಂದಿದ್ದ ಪುನೀತ್ ಅಪ್ಪಾಜಿಯ ನೆಚ್ಚಿನ ತಾಣಗಳಾದ ರಾಜ್ ಹುಟ್ಟಿದ ಮನೆ, ದೊಡ್ಡ ಆಲದಮರ, ಬೀರಪ್ಪ ದೇವಸ್ಥಾನ, ಜಮೀನು ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಕಾಲಕಳೆದಿದ್ದರು. ಅಭಿಮಾನಿಗಳೊಂದಿಗೆ, ಗ್ರಾಮದ ಹಿರಿಯರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದರು ಎಂದು ತಿಳಿಸಿದ್ದಾರೆ.
ಗ್ರಾಮಸ್ಥರಿಂದ ಶ್ರದ್ದಾಂಜಲಿ: ಚಾಮರಾಜನಗರ ಜಿಲ್ಲೆ ಗಡಿಭಾಗದ ದೊಡ್ಡ ಗಾಜನೂರು ಗ್ರಾಮದಲ್ಲಿ ಮೇರುನಟ ರಾಜ್ಕುಮಾರ್ ಪುತ್ರ ಪುನೀತ್ರಿಗೆ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಲ್ಲಿ ಪುನೀತ್ರ ಚಿತ್ರಗಳಿಗೆ ಪುಷ್ಪಹಾರ ಹಾಕಿ ನಮನ ಸಲ್ಲಿಸಲಾಯಿತು. ಡಾ.ರಾಜ್ ಹುಟ್ಟಿದ ಮನೆಯ ಮುಂಭಾಗ ಪುನೀತ್ ಭಾವ ಚಿತ್ರ ಇಟ್ಟು ಪೂಜೆ ಮಾಡಿ ದೀಪ ಹಚ್ಚಿದ್ದಾರೆ.