ಆತ ಕೊಲೆ ಮಾಡಿ ಜೈಲು ಸೇರಿದ್ದು ಇನ್ನೊಂದು ಕೊಲೆ ಮಾಡಲೆಂದೇ...! ತಂಗಿ ಸಾವಿಗೆ ವರ್ಷಗಳ ಬಳಿಕ ಸೇಡು

Tihar
Published on

ನವದೆಹಲಿ: ಅವನಿಗಿದ್ದದ್ದು ಆಕೆಯೊಬ್ಬಳೇ ತಂಗಿ. ತನ್ನ ಜತೆಗಿದ್ದವನೇ ಇಂಥದ್ದೊಂದು ಕೃತ್ಯ ಎಸಗುತ್ತಾನೆ ಎಂದು ಅವನಿಗೆ ತಿಳಿದಿರಲಿಲ್ಲ. ಆದರೆ, ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ವರ್ಷಗಟ್ಟಲೇ ಕಾದು ಅದರಲ್ಲಿ ಯಶಸ್ವಿಯಾದ.

ಎರಡು ದಿನಗಳ ಹಿಂದಷ್ಟೇ ತಿಹಾರ್​ ಜೈಲಿನಲ್ಲಿ ಕೈದಿಯೊಬ್ಬನ ಹತ್ಯೆ ನಡೆದಿತ್ತು. ಕೊಲೆಗೈದವನ ಹಾಗೂ ಜೈಲಿನಲ್ಲಿದ್ದವನ ಇತಿಹಾಸ ಕೆದಕಿದಾಗ ಇದೊಂದು ಪ್ರತೀಕಾರದ ಕ್ರಮವಾಗಿತ್ತು ಎಂಬುದು ಪೊಲೀಸರಿಗೆ ಗೊತ್ತಾಗಿದೆ.

ಮೆಹ್ತಾಬ್​ (27) ಕೊಲೆಯಾದ ಕೈದಿ. ಈತನನ್ನು ಕೊಂದವನು ಜಾಕೀರ್​(21). 2014ರಲ್ಲಿ ಅಂಬೇಡ್ಕರ್​ನಗರದಲ್ಲಿ ಜಾಕೀರ್​ ತಂಗಿ ಮೇಲೆ ಮೆಹ್ತಾಬ್​ ಅತ್ಯಾಚಾರ ಎಸಗಿದ್ದ. ಇದೇ ನೋವಿನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಮೆಹ್ತಾಬ್​ ಜೈಲು ಸೇರಿದ್ದ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಜಾಕೀರ್​ ಕಾಯುತ್ತಿದ್ದ.

2018ರಲ್ಲಿ ಜಾಕೀರ್​ ಕೊಲೆ ಮಾಡಿ ಜೈಲು ಸೇರಿದ. ಆದರೆ, ಆತನ ವಯಸ್ಸು 20ಕ್ಕಿಂತ ಕಡಿಮೆಯಾಗಿದ್ದರಿಂದ ಬೇರೆ ವಿಭಾಗದಲ್ಲಿ ಇಡಲಾಗಿತ್ತು. ಇತ್ತೀಚೆಗಷ್ಟೇ ಆತನಿಗೆ 21 ವರ್ಷ ತುಂಬಿದ್ದರಿಂದ ಸಾಮಾನ್ಯ ಕೈದಿಗಳಿರುವ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮೆಹ್ತಾಬ್​ ಅಲ್ಲಿರಲಿಲ್ಲ. ಹೀಗಾಗಿ ತನ್ನ ಜತೆಗಿದ್ದವರೊಂದಿಗೆ ಜಗಳ ಮಾಡಿಕೊಂಡ ಜಾಕೀರ್​ ಮತ್ತೊಂದು ಕಡೆ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದ. ಮೆಹ್ತಾಬ್​ ಇರುವ ಜಾಗಕ್ಕೆ ಬಂದಿದ್ದ.

ಕೆಲ ದಿನಗಳಿಂದ ಮೆಹ್ತಾಬ್​ನ ಚಲನವಲನಗಳನ್ನು ಗಮನಿಸಿದ್ದ. ಜುಲೈ 29ರಂದು ಬೆಳಗ್ಗೆ ಎಲ್ಲರನ್ನೂ ಸಾಮೂಹಿಕ ಪ್ರಾರ್ಥನೆಗೆ ಕರೆದಾಗ ಆ ಸಮಯಕ್ಕಾಗಿಯೇ ಕಾದು ಕುಳಿತಿದ್ದ. ಆತನ ಜತೆಗಿದ್ದರು ಹೊರ ಹೋದ ಬಳಿಕ ಒಂಟಿಯಾಗಿದ್ದ ಮೆಹ್ತಾಬ್​ ಬ್ಯಾರಕ್​ಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಂಗಿ ಸಾವಿನ ವಿರುದ್ಧ ಸೇಡು ತೀರಿಸಕೊಳ್ಳಲೆಂದೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net