

ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಕರೊನಾ ಕೇಸ್ಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದನ್ನು ನಿಯಂತ್ರಿಸುವುದು ಹೇಗೆಂಬ ಚಿಂತೆಯಲ್ಲಿದೆ ಅಲ್ಲಿನ ಸರ್ಕಾರ.
ಸದ್ಯ ಮಹಾರಾಷ್ಟ್ರದಲ್ಲಿ 1.75 ಲಕ್ಷ ಕರೊನಾ ಸೋಕಿತರಿದ್ದಾರೆ. ಇದರಲ್ಲಿ 75 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಾಗಿವೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಮುಂಬೈನಲ್ಲಿಯೇ ಇವೆ.
ಸದ್ಯ ದೇಶಾದ್ಯಂತ ಕೇಂದ್ರ ಸರ್ಕಾರವೇ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಿದೆ. ಈ ನಡುವೆ, ಮುಂಬೈ ಪೊಲೀಸ್ ಆಯುಕ್ತರು ಇಡೀ ನಗರಕ್ಕೆ ಅನ್ವಯವಾಗುವಂತೆ 144 ಕಲಂ ಅರ್ಥಾತ್ ನಿಷೇಧಾಜ್ಞ ಜಾರಿಗೊಳಿಸಿದ್ದಾರೆ.
ಧಾರ್ಮಿಕ ಸ್ಥಳಗಳು ಸೇರಿ ಎಲ್ಲೆಡೆ ಇದು ಅನ್ವಯವಾಗಲಿದೆ. ನಗರಾಡಳಿತ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿದ ಪ್ರದೇಶಗಳಲ್ಲಿ ಯಾರೂ ಓಡಾಡುವಂತೆಯೇ ಇಲ್ಲ ಎಂದು ಆಯುಕ್ತ ಪ್ರಣಯ್ ಅಶೋಕ್ ಆದೇಶ ಹೊರಡಿಸಿದ್ದಾರೆ. ಆದರೆ, ಕೆಲ ಅಗತ್ಯ ವಸ್ತುಗಳ ಸಾಗಣೆ, ಸೇವೆಯಲ್ಲಿ ತೊಡಗಿರುವವರಿಗೆ ಇದರಿಂದ ವಿನಾಯ್ತಿ ನೀಡಲಾಗಿದೆ.
ಇನ್ನು, ರಾತ್ರಿ 9ರಿಂದ ಬೆಳಗ್ಗಿನ ಐದು ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈ ಅವಧಿಯಲ್ಲಿ ಮನೆಯಿಂದ ಹೊರ ಬರುವಂತೆಯೇ ಇಲ್ಲ. ವೈದ್ಯಕೀಯ ಸೇವೆ ಅಥವಾ ತುರ್ತು ಪರಿಸ್ಥಿತಿ ಇದ್ದಲ್ಲಷ್ಟೇ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಹೀಗಾಗಿ ಮುಂಬೈಯಲ್ಲಿ ಜನ ಅಕ್ಷರಶಃ ಮನೆಯಲ್ಲಿಯೇ ಬಂಧಿಯಾಗುವಂತಾಗಿದೆ. ಆದರೆ, ಕರೊನಾ ಹೆಮ್ಮಾರಿ ಹಬ್ಬುವುದನ್ನು ತಡೆಯಲು ಇದು ಅಗತ್ಯವಾಗಿದೆ. ಜನರು ಆರೋಗ್ಯದಿಂದ ಇರಬೇಕು ಎಂದರೆ ಇದೆಲ್ಲ ಅನಿವಾರ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.