

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ಎರಡು ಕಂಪನಿಗಳನ್ನು ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಅಮೆರಿಕದ ಫೆಡರಲ್ ಕಮ್ಯುನಿಕೇಷನ್ ಕಮಿಷನ್ (ದೂರ ಸಂಪರ್ಕ ಆಯೋಗ) ಘೋಷಿಸಿದೆ.
ಹುವೈ ಹಾಗೂ ಝೆಡ್ಟಿಇ ಕಂಪನಿಗಳು, ಅವುಗಳಿಗೆ ಸಂಬಂಧಿಸಿದ ಸಂಸ್ಥೆಗಳು, ಉಪಕ್ರಮಗಳು ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಘೋಷಿಸಿದೆ. ಇದು ಚೀನಾದ ದೈತ್ಯ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚೀನಾ ಸರ್ಕಾರದೊಂದಿಗೆ ನಿಕಟತೆ ಹೊಂದಿರುವ, ಅಮರಿಕದ ಪ್ರಜೆಗಳ ಮಾಹಿತಿಯನ್ನು ಚೀನಾಗೆ ಒದಗಿಸುವ ಬೇಹುಗಾರಿಕೆ ಆರೋಪಕ್ಕೆ ತುತ್ತಾಗಿರುವ ಈವೆರಡೂ ಕಂಪನಿಗಳು ಅಮೆರಿಕದ ಕ್ರಮದಿಂದ ಭಾರಿ ಸಂಕಷ್ಟಕ್ಕೆ ಸಿಲುಕಿವೆ.
ಆದರೆ, ಅಮೆರಿಕದ ಈ ನಿರ್ಧಾರದಿಂದಾಗಿ 5ಜಿ ಅನುಷ್ಠಾನ ಹಾಗೂ ಇತರ ದೂರ ಸಂಪರ್ಕ ಸೇವೆಗಳ ವೆಚ್ಚದಲ್ಲಿ ಶೇ.30 ಕ್ಕೂ ಹೆಚ್ಚು ಏರಿಕೆಯಾಗಲಿದೆ ಎಂದು ಈ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ. ಝೆಡ್ಟಿಇಗೆ 130 ಕೋಟಿ ಡಾಲರ್ ದಂಡ ಕಟ್ಟಿ ಅಮೆರಿಕದಲ್ಲಿ ವಹಿವಾಟು ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಕಾಶ ನೀಡಿದ್ದರು. ಆದರೆ, ದೂರಸಂಪರ್ಕ ಆಯೋಗ ಇದನ್ನು ತೆಗೆದು ಹಾಕಿದಂತಾಗಿದೆ.
ಅಷ್ಟಕ್ಕೂ ಅಮೆರಿಕದ ಫೆಡರಲ್ ಕಮ್ಯುನಿಕೇಷನ್ ಕಮಿಷನ್ ಅಧ್ಯಕ್ಷರಾಗಿರೋದು ಭಾರತೀಯ ಮೂಲದ ಅಜಿತ್ ವರದರಾಜ್ ಪೈ. ಮೂಲತಃ ನ್ಯಾಯವಾದಿಯಾಗಿರುವ ಪೈ, ಒಬಾಮಾ ಅಧಿಕಾರವಧಿಯಲ್ಲಿ ಆಯೋಗದ ಆಯುಕ್ತರಾಗಿ ನೇಮಕವಾಗಿದ್ದರು. ಡೊನಾಲ್ಡ್ ಟ್ರಂಪ್ ಇವರನ್ನು ಎರಡನೇ ಅವಧಿಗೂ ಮುಂದುವರಿಸಿದರು.
ಇವೆರಡು ಕಂಪನಿಗಳು ಚೀನಾದ ಕಮ್ಯೂನಿಸ್ಟ್ ಪಾರ್ಟಿ ಹಾಗೂ ಸೇನೆಯೊಂದಿಗೆ ಬಾಂಧವ್ಯ ಹೊಂದಿವೆ. ಅಲ್ಲಿನ ಸರ್ಕಾರದ ಗುಪ್ತಚರ ಸೇವೆಗೆ ಸಹಕರಿಸುತ್ತಿವೆ ಎಂದು ಪೈ ಹೇಳಿದ್ದಾರೆ. ಅಷ್ಟಕ್ಕೂ ಹುವೈ ಜತೆಗಿನ ಅಮೆರಿಕದ ಸಂಘರ್ಷ ದಶಕಗಳಷ್ಟು ಹಳೆಯದಾಗಿದೆ.