

ನವದೆಹಲಿ: ವಿಶ್ವದ ಸಿರಿವಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ವಾಣಿಜ್ಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ.
ಬಿಗ್ ಬಜಾರ್ ಸೂಪರ್ ಮಾರ್ಕೆಟ್ಅನ್ನು ಸರಣಿಯನ್ನು ರಿಲಯನ್ಸ್ ಇಂಡಸ್ಟ್ರಿಸ್ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ. ಜುಲೈ 15ರೊಳಗಾಗಿ ಈ ಕುರಿತ ಒಪ್ಪಂದ ಏರ್ಪಡಲಿದೆ ಎಂದು ಹೇಳಲಾಗಿದೆ.
ಬಿಗ್ ಬಜಾರ್, ಫುಡ್ ಬಜಾರ್, ಫ್ಯಾಷನ್ ಅಟ್ ಬಿಗ್ ಬಜಾರ್, ಇ-ಝೋನ್ ಹಾಗೂ ಫುಡ್ ಹಾಲ್ಗಳ ಸರಣಿ ಸೂಪರ್ ಮಾರ್ಕೆಟ್ಗಳು ಫ್ಯೂಚರ್ ಗ್ರೂಪ್ ಅಧೀನದಲ್ಲಿವೆ. ಇದರ ಮುಖ್ಯಸ್ಥ ಕಿಶೋರ್ ಬಿಯಾನಿಯೊಂದಿಗೆ ಮುಖೇಶ್ ಅಂಬಾನಿ ಮಾತುಕತೆ ನಡೆಸಿದ್ದಾರೆ. ಜುಲೈ 15ರಂದು ನಡೆಯಲಿರುವ ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ಮಹಾಸಭೆ ವೇಳೆ ಈ ಕುರಿತ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
ಸಾಲದಿಂದ ಕಂಗೆಟ್ಟಿರುವ ಕಿಶೋರ್ ಬಿಯಾನಿ ತನ್ನ ವಹಿವಾಟನ್ನು ಮಾರುವ ಉದ್ದೇಶದೊಂದಿಗೆ ಹಲವರೊಂದಿಗೆ ಮಾತುಕತೆ ನಡೆಸಿದ್ದರು. ಫ್ಯೂಚರ್ ಗ್ರೂಪ್ನಲ್ಲಿ ಬಂಡವಾಳ ತೊಡಗಿಸಲು ಅಜೀಮ್ ಪ್ರೇಮ್ಜಿ ಇನ್ವೆಸ್ಟ್, ಸಮಾರಾ ಕ್ಯಾಪಿಟಲ್ ಹಾಗೂ ಅಮೆಜಾನ್ ಜೆಫ್ ಬಿಜೋಸ್ ಉತ್ಸುಕರಾಗಿದ್ದರು.
ಅಮೆಜಾನ್ ಈ ಹಿಂದೆಯೇ ಫ್ಯೂಚರ್ ಗ್ರೂಪ್ನಲ್ಲಿ ಬಂಡವಾಳ ಹೂಡಲು ಮುಂದಾಗಿತ್ತು. ಇದಲ್ಲದೇ, ಪರೋಕ್ಷವಾಗಿ ಬಿಗ್ ಬಜಾರ್ನಲ್ಲಿ ಕೊಂಚ ಹೂಡಿಕೆ ಮಾಡಿದೆ.
ಸದ್ಯ ಫ್ಯೂಚರ್ ರಿಟೇಲ್, ಫ್ಯೂಚರ್ ಲೈಫ್ಸ್ಟೈಲ್ ಪ್ಯಾಷನ್ಸ್, ಫ್ಯೂಚರ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಈ ಸಮೂಹ ನಿರ್ವಹಿಸುತ್ತಿದೆ. ಮೊದಲು ಈ ಮೂರನ್ನು ಒಂದಾಗಿಸಲಾಗುತ್ತದೆ. ನಂತರ ಒಂದೇ ಸಂಸ್ಥೆಯನ್ನು ರಿಲಯನ್ಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.
ಕಳೆದ ವಾರದವರೆಗೂ ರಿಲಯನ್ಸ್ ಜತೆಗಿನ ಒಪ್ಪಂದ ಖಚಿತವಾಗಿರಲಿಲ್ಲ. ಸದ್ಯ ಈ ಒಪ್ಪಂದ ಸ್ಪಷ್ಟ ದಿಕ್ಕಿನಲ್ಲಿ ಸಾಗುತ್ತಿದ್ದು, ರಿಲಯನ್ಸ್ ತೆಕ್ಕೆಗೆ ಸೇರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.