

ಬೆಂಗಳೂರು: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಾಳೆ (ಮೇ.07) ಎರಡನೇ ಹಂತದ ಮತದಾನ ನಡೆಯಲಿದೆ. ಇನ್ನು ಚುನಾವಣೆಯ ವಿಷಯಕ್ಕಿಂತ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಒಂದೆಡೆ ವಿದೇಶಕ್ಕೆ ಹಾರಿರುವ ಪ್ರಜ್ವಲ್ ಬೆಂಗಳೂರಿಗೆ ಹಾಜರಾಗುವತ್ತ ಎಸ್‌ಐಟಿ ಅಧಿಕಾರಿಗಳು ಏರ್ಪೋರ್ಟ್ನಲ್ಲಿ ಕಾದು ಕುಳಿತರೆ, ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಕೇಸ್ನಲ್ಲಿ ಮೊದಲ ಆರೋಪಿಯಾಗಿರುವ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣರನ್ನು ಇದೀಗ ಎಸ್‌ಐಟಿ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.
ಸದ್ಯ ನ್ಯಾಯಾಧೀಶರ ನಿವಾಸದಲ್ಲಿ ಎಚ್.ಡಿ. ರೇವಣ್ಣ ಪರ ವಕೀಲ ಮತ್ತು ಎಸ್‌ಐಟಿ ಅಧಿಕಾರಿಗಳ ನಡುವಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರು, ರೇವಣ್ಣರನ್ನು ಮೇ.08ರವರೆಗೆ ಕಸ್ಟಡಿಗೆ ಒಪ್ಪಿಸಿ ಎಂದು ಆದೇಶಿಸಿದರು. ಈ ವೇಳೆ ತಮ್ಮ ಕೈಯಲ್ಲಿ ಮೂರು ನಿಂಬೆಹಣ್ಣು ಹಿಡಿದಿದ್ದ ರೇವಣ್ಣ, ಅದನ್ನು ಹಿಡಿದುಕೊಂಡೇ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ನ್ಯಾಯಾಧೀಶರ ಮನೆಗೆ ಹೋಗುವ ಮುನ್ನ ಮತ್ತು ವಿಚಾರಣೆಯ ವೇಳೆಯೂ ಅವರ ಕೈಯಲ್ಲಿ ನಿಂಬೆಹಣ್ಣು ಇರುವುದು ಕಂಡುಬಂದಿದೆ.
ವಿಚಾರಣೆಯ ವೇಳೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ರೇವಣ್ಣ, ನನ್ನ ಮೇಲೆ ಬಂದಿರುವುದು ಸುಳ್ಳು ಆರೋಪ. ರಾಜಕೀಯ ಬೆಳವಣಿಗೆ ಸಹಿಸದವರು ಇಂತಹ ಪಿತೂರಿ ಮಾಡಿದ್ದಾರೆ, ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿರುವುದು ಮೂಲಗಳಿಂದ ತಿಳಿದುಬಂದಿದೆ. ಈ ಬೆನ್ನಲ್ಲೇ ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ವಿದೇಶದಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಅವರನ್ನು ಅರೆಸ್ಟ್ ಮಾಡಲು ಇದೀಗ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.