ಕಾಂಗ್ರೆಸ್ ಚೊಂಬು ಜಾಹಿರಾತಿಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತಿರುಗೇಟು! ಹೇಳಿದ್ದಿಷ್ಟು

WhatsApp Image 2024-04-20 at 8.11.30 PM
Published on

ಚಿಕ್ಕಬಳ್ಳಾಪುರ: ಇಂದು ಲೋಕಸಭಾ ಚುನಾವಣೆಯ ಹಿನ್ನೆಲೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ಎಚ್​.ಡಿ. ದೇವೇಗೌಡರು ಪಕ್ಷದ ಜತೆಗೆ ಇರುವುದರ ಬಗ್ಗೆ ಮಾತನಾಡಿ, ದೇವೇಗೌಡರು ಅತ್ಯಂತ ಅನುಭವಿ ರಾಜಕಾರಣಿ. ಅವರ ಮಾರ್ಗದರ್ಶನ ನಮ್ಮ ಜೊತೆಗಿದೆ. ಎನ್‍ಡಿಎ ಸರಕಾರ ರೈತರನ್ನು ಆರ್ಥಿಕವಾಗಿ ಬಲಪಡಿಸುತ್ತಿದೆ. ಶ್ರೀ ಅನ್ನ ಮೂಲಕ ಸಿರಿಧಾನ್ಯವನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಈ ಭಾಗದ ಜನರಿಗೆ ನೆರವಾಗಲಿದೆ ಎಂದು ಹೇಳಿದರು.

ಬಿಜೆಪಿ ಸರಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ಸಿಗುತ್ತಿತ್ತು. ಅದನ್ನು 6 ಸಾವಿರಕ್ಕೆ ಇಳಿಸಲಾಗಿದೆ. 4 ಸಾವಿರ ಕೊಡುತ್ತಿದ್ದುದನ್ನು ರದ್ದು ಮಾಡಿದ್ದಾರೆ. ಇಂಥ ರೈತ ವಿರೋಧಿಗಳಿಗೆ ಪಾಠ ಕಲಿಸಿ ಎಂದು ಮೋದಿ ಮನವಿ ಮಾಡಿದರು. ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಡಿ ಮೂಲಸೌಕರ್ಯ ಹೆಚ್ಚಿಸುತ್ತಿದ್ದೇವೆ. ಹೆದ್ದಾರಿಗಳ ಸಂಖ್ಯೆ ವ್ಯಾಪ್ತಿ ಹೆಚ್ಚಿಸಿದ್ದೇವೆ. ಈ ಭಾಗದಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಿಸಲಾಗುತ್ತಿದೆ. ನಂದಿ ಬೆಟ್ಟ, ತಾಯಿ ಕೋಲಾರಮ್ಮನ ಆಶೀರ್ವಾದ ಇದೆ. ಇವುಗಳಿಗೆ ಪ್ರೋತ್ಸಾಹ ಕೊಡುತ್ತೇವೆ ಎಂದರು.

ಇನ್ನು ಕಾಂಗ್ರೆಸ್​ ನಾಯಕರು ಚೊಂಬು ತೋರಿಸಿ ಜಾಹೀರಾತನ್ನು ಬಹಿರಂಗಪಡಿಸಿದರ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೇಶವನ್ನು ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋದ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣ. ಈ ರಾಜ್ಯದ ಮುಖ್ಯಮಂತ್ರಿಗಳು ಚೊಂಬು ಜಾಹೀರಾತು ಪ್ರಕಟಿಸಿದ್ದಾರೆ. ಡಾ. ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಚೊಂಬು ಕೊಟ್ಟಿದ್ದಾರೆ ಎಂದರು.

ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷೆ ಆಗಿದ್ದಾಗ ಅದೆಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಪ್ರಶ್ನಿಸಿದರು. ರಾಷ್ಟ್ರದ ಸಂಪತ್ತನ್ನು ಸೂರೆ ಮಾಡಿ ಚೊಂಬು ಬರಿದಾಗಿದೆ. ಬರಿಯ ಚೆಂಬನ್ನು ಯಾರ ಕೈಗೆ ಕೊಟ್ಟರು ಈ ಕಾಂಗ್ರೆಸ್ ನಾಯಕರು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಿಮ್ಮವರು ಸಂಪತ್ತು ಲೂಟಿ ಮಾಡಿ ಬರಿ ಚೊಂಬು ನೀಡಿದ್ದರು. 10 ವರ್ಷ ದೇಶವಾಳಿದ ಮೋದಿಯವರು ದೇಶದ ಬಡವರು, ಪರಿಶಿಷ್ಟ ಸಮುದಾಯ, ಹಿಂದುಳಿದವರು, ಸಣ್ಣ-ಸಣ್ಣ ಸಮಾಜವನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ. ಅಂತಹ ಮಹಾನುಭಾವ ಮೋದಿ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net