ವಸಿಷ್ಠ ಅಭಿನಯದ 'ಲವ್​ ಲಿ' ಸಿನಿಮಾ ಸೆಟ್​ಗೆ ಹರಿಪ್ರಿಯಾ ಎಂಟ್ರಿ …

Vasishta Simha - Haripriya - Love Li 2
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹೊಸ ಪ್ರಣಯಪಕ್ಷಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವಾರವಷ್ಟೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಆ ನಂತರ ಕೆಲಸಕ್ಕೆ ಹಾಜರಾಗಿರುವ ಇಬ್ಬರೂ ಇಬ್ಬರೂ ತೆಲುಗಿನ 'ಎವಡು' ಚಿತ್ರದ ಕನ್ನಡ ರೀಮೇಕ್​ ಚಿತ್ರಕ್ಕಾಗಿ ಜತೆಯಾಗಿ ಡಬ್​ ಮಾಡಿದ್ದರು. ಈಗ ವಸಿಷ್ಠ ಸಿಂಹ ಅಭಿನಯದ 'ಲವ್​ ಲಿ' ಚಿತ್ರದ ಸೆಟ್​ಗೆ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ.

'ಲವ್​ ಲಿ' ಚಿತ್ರದ ಚಿತ್ರೀಕರಣ ಇದೀಗ ಉಡುಪಿಯಲ್ಲಿ ನಡೆಯುತ್ತಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್​, ದತ್ತಣ್ಣ, ಸಾಧು ಕೋಕಿಲ ಮುಂತಾದವರು ಅಭಿನಯಿಸಿರುವ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಸೆಟ್​ಗೆ ಹರಿಪ್ರಿಯಾ ಭೇಟಿ ಕೊಟ್ಟು, ಎಲ್ಲರ ಜತೆಗೆ ಮಾತನಾಡಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿ ಖುಷಿಪಟ್ಟಿದ್ದಾರೆ.

ಇದಕ್ಕೂ ಮುನ್ನ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ಶುಕ್ರವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅದಾದ ನಂತರ ಕಾಣಿಯೂರು ಮಠಕ್ಕೆ ಭೇಟಿ ನೀಡಿ ವಿದ್ಯಾವಲ್ಲಭ ತೀರ್ಥ ಶ್ರೀಗಳಿಂದ ಅನುಗ್ರಹ ಮತ್ತು ಮಂತ್ರಾಕ್ಷತೆ ಪಡೆದಿದ್ದಾರೆ.

ಚೇತನ್ ಕೇಶವ್ ನಿರ್ದೇಶನದ 'ಲವ್​ ಲಿ', ಬರೀ ಪ್ರೇಮಕಥೆ ಇರುವ ಚಿತ್ರವಷ್ಟೇ ಅಲ್ಲ, ರೌಡಿಸಂ ಸಹ ಇದೆಯಂತೆ. 'ಮಫ್ತಿ' ಖ್ಯಾತಿಯ ನರ್ತನ್​ ಜತೆಗೆ ಕೆಲಸ ಮಾಡಿ ಅನುಭವವಿರುವ ಚೇತನ್​ ಕೇಶವ್​ ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರವನ್ನು ರವಿ ಕುಮಾರ್​ ನಿರ್ಮಿಸುತ್ತಿದ್ದು, ಅನೂಪ್​ ಸೀಳಿನ ಸಂಗೀತ ಮತ್ತು ಅಶ್ವಿನ್​ ಕೆನಡಿ ಅವರ ಛಾಯಾಗ್ರಹಣವಿದೆ.

ಈ ಚಿತ್ರದ ಮೂಲಕ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಬೇಬಿ ವಂಶಿಕಾ (ಮಾಸ್ಟರ್​ ಆನಂದ್​ ಪುತ್ರಿ) ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net