ಹೊಸ ವರ್ಷಕ್ಕೆ ರವಿಚಂದ್ರನ್​ರಿಂದ ಹೊಸ ತರಹದ ಸಿನಿಮಾ …

Gowri 2
Published on

ಬೆಂಗಳೂರು: ರವಿಚಂದ್ರನ್​ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ 'ಕನ್ನಡಿಗ' ಚಿತ್ರವನ್ನು ನಿರ್ಮಿಸಿದ್ದ ಎನ್.ಎಸ್. ರಾಜಕುಮಾರ್ ಈ ಬಾರಿ ರವಿಚಂದ್ರನ್​ಗಾಗಿ 'ಗೌರಿ' ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಬಾರಿ ನಿರ್ಮಾಣದಲ್ಲಿ ವಿ.ಎಸ್ ರಾಜಕುಮಾರ್ ಸಹ ಕೈ ಜೋಡಿಸಿದ್ದಾರೆ.

'ಕನ್ನಡಿಗ' ಚಿತ್ರದಂತೆಯೇ ಈ ಚಿತ್ರದ ಮುಹೂರ್ತವೂ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು ಮತ್ತು ಆ ಚಿತ್ರಕ್ಕೆ ಕ್ಲಾಪ್​ ಮಾಡಿದಂತೆಯೇ ಈ ಚಿತ್ರದ ಮೊದಲ ದೃಶ್ಯಕ್ಕೂ ಶಿವರಾಜಕುಮಾರ್ ಕ್ಲಾಪ್​ ಮಾಡಿ ಶುಭ ಹಾರೈಸಿದರು.

ಈ ಚಿತ್ರದಲ್ಲಿ ಕೇವಲ ಮೂರೇ ಮೂರು ಪಾತ್ರಗಳಿರುತ್ತವಂತೆ. ಚಿತ್ರದ ಕುರಿತು ಮಾತನಾಡುವ ರವಿಚಂದ್ರನ್​, 'ಕನ್ನಡ ಚಿತ್ರರಂಗಕ್ಕೆ ಈಗ ಬಹಳ ಒಳ್ಳೆಯ ಕಾಲ. ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿವೆ. ಅದರಲ್ಲೂ ವಿಭಿನ್ನ ಕಥೆ ಇರುವ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. 'ಗೌರಿ' ಸಹ ವಿಭಿನ್ನ ಕಥೆಯ ಚಿತ್ರ. ಇಡೀ ಚಿತ್ರದಲ್ಲ ಕೇವಲ ಮೂರೇ ಮೂರು ಪಾತ್ರಗಳಿರುತ್ತವೆ. ಕೆಲವು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿ ಬಹುಭಾಗದ ಚಿತ್ರೀಕರಣ ನಡೆಯಲಿದೆ. ಹೊಸವರ್ಷಕ್ಕೆ ಹೊಸತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ' ಎನ್ನುತ್ತಾರೆ ರವಿಚಂದ್ರನ್​.

'ಗೌರಿ' ಚಿತ್ರವನ್ನು ಅನೀಸ್​ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ರವಿಚಂದ್ರನ್ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿರುವುದು ಸಂತೋಷ ಎಂದು ಮಾತು ಪ್ರಾರಂಭಿಸುವ ಅವರು, 'ಇದೊಂದು ಕೌಟುಂಬಿಕ ಚಿತ್ರ. ಇದುವರೆಗೂ ಸಾಕಷ್ಟು ಫ್ಯಾಮಿಲಿ ಚಿತ್ರಗಳು ಬಂದಿವೆ. ಈ ಚಿತ್ರದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಯಾಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ. ಅವರಿಬ್ಬರ ನಡುವಿನ ಪ್ರೀತಿಗೆ ಯಾಕೆ ಸಮಸ್ಯೆ ಎದುರಾಗುತ್ತವೆ ಮತ್ತು ಅವರು ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. 'ಗೌರಿ' ಚಿತ್ರಕ್ಕೆ 'ಶಂಕರ B/H' ಎಂಬ ಅಡಿಬರಹವಿದೆ. ಇದೊಂದು ವಿಭಿನ್ನವಾದ ಚಿತ್ರಕಥೆ ಎನ್ನಬಹುದು. ಕೌಟುಂಬಿಕ ಚಿತ್ರವಾದರೂ, ಕಥೆ ಕಾಡಿನಲ್ಲಿ ನಡೆಯುತ್ತದೆ. ದಾಂಡೇಲಿ, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ ಅನೀಸ್.

ಇದು ರಾಜಕುಮಾರ್​ ನಿರ್ಮಾಣದ 15ನೇ ಚಿತ್ರ. ಈ ಚಿತ್ರಕ್ಕೆ ಮುಂಬೈನ ಬರ್ಕಾ ಬಿಷ್ತ್​​ ನಾಯಕಿ. ಗ್ರೀಷ್ಮಾ ಎಂಬ ಬಾಲನಟಿ ನಟಿಸುತ್ತಿದ್ದು, ಚಿತ್ರದಲ್ಲಿ ಮೂರು ಪಾತ್ರಗಳಿರುತ್ತವಂತೆ. ಚಿತ್ರಕ್ಕೆ ಸತೀಶ್​ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net