

ಬೆಂಗಳೂರು: ನಾನು ಸೂರ್ಯವಂಶ ಸೀರಿಯಲ್ ಮಾಡ್ತೀನಿ ಅನ್ನೋ ಸುದ್ದಿ ಗೊತ್ತಾದ ತಕ್ಷಣ ಕಿರುತೆರೆ ನಿರ್ಮಾಪಕರ ಸಂಘದವರು ಉದಯ ಟಿವಿಗೆ ಕಾಲ್ ಮಾಡಿ 'ಅನಿರುದ್ಧ್ ಅವ್ರನ್ನ ಹಾಕೋಬೇಡಿ' ಅಂತ ಹೇಳಿದ್ದಾರೆ. ಸೂರ್ಯವಂಶ ಸೀರಿಯಲ್ ಬಗ್ಗೆ ನನಗೆ ಗೊತ್ತಾಗೋ ಮೊದಲೇ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಗೊತ್ತಾಗಿದೆ. ಈಗ ಮತ್ತೆ ನಂಗೆ ಅಡ್ಡಗಾಲು ಹಾಕ್ತಿದ್ದಾರೆ. ನಾನು ಕೋರ್ಟ್ಗೆ ಹೋಗಬಹುದು. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ನ್ಯಾಯ ಸಿಗುವ ಭರವಸೆಯಲ್ಲಿ ಇಲ್ಲಿಗೆ ಬಂದಿದ್ದೇಗೆ ಎಂದು ನಟ ಅನಿರುದ್ಧ್ ಹೇಳಿದರು.
ಜೊತೆಜೊತೆಯಲಿ ಸೀರಿಯಲ್ ತಂಡದೊಂದಿಗಿನ ವಿವಾದದ ಬಳಿಕ ಆ ಸೀರಿಯಲ್ನಿಂದ ಹೊರ ಬಂದಿರುವ ಅನಿರುದ್ಧ್ಗೆ ಬೇರೆ ಯಾವ ಸೀರಿಯಲ್ನಲ್ಲೂ ಅವಕಾಶ ನೀಡಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘವು ಹೇಳಿದೆ. ಅನಿರುದ್ಧ್ರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಭಾರೀ ಸುದ್ದಿಯಾಗಿತ್ತು. ಪರ-ವಿರೋಧ ಚರ್ಚೆಯೂ ಆಗುತ್ತಿದೆ. ಇದರ ನಡುವೆಯೇ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಎಸ್.ನಾರಾಯಣ್ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ್ ಅವರನ್ನ ಸೇರಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದನ್ನು ವಿರೋಧಿಸಿ ಕಿರುತೆರೆ ನಿರ್ಮಾಪಕರ ಸಂಘ, ಅನಿರುದ್ಧ್ ಅವರನ್ನು ಸೇರಿಸಿಕೊಳ್ಳಬೇಡಿ ಎಂದು ಮನವಿ ಮಾಡಿದೆ. ಈ ಪ್ರಕರಣ ವಾಣಿಜ್ಯ ಮಂಡಳಿಯ ಅಂಗಳಕ್ಕೆ ಹೋಗಿದ್ದು, ಇಂದು(ಶುಕ್ರವಾರ) ಸಂಜೆ ನಡೆದ ಸಭೆಯಲ್ಲಿ ಅನಿರುದ್ಧ್ ಪರ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮ ಹರೀಶ್ ಮತ್ತು ಕಾರ್ಯದರ್ಶಿ ಸುಂದರ್ ರಾಜ್ ಕೂಡ ಬ್ಯಾಟಿಂಗ್ ಬೀಸಿದ್ದಾರೆ. ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಎಂದಿದ್ದಾರೆ.
ಬಳಿಕ ಮಾತನಾಡಿದ ಅನಿರುದ್ಧ್, ಈ ಸಮಸ್ಯೆಯನ್ನು ಫಿಲ್ಮ್ ಚೇಂಬರ್ನಲ್ಲಿ ಬಗೆಹಸಿರುವ ಭರವಸೆ ನನಗಿದೆ. ಇನ್ನು ಎಸ್.ನಾರಾಯಣ್ ಅವರು 'ಯಾರ್ ಏನೇ ಹೇಳಿದರೂ ಸೀರಿಯಲ್ ಮಾಡೋಣ' ಅಂತ ನನಗೆ ಹೇಳಿದ್ದಾರೆ. 'ಸೂರ್ಯವಂಶ ಸೀರಿಯಲ್ ಮಾಡೇ ಮಾಡ್ತೀನಿ, ನೀವೇ ಕಲಾವಿದರು' ಎಂದಿದ್ದಾರೆ. ಎಸ್. ನಾರಾಯಣ್ ಅವರ ನಿರ್ಧಾರ ನಂಗೆ ಖುಷಿಕೊಟ್ಟಿದೆ. ಹಿಂದೆ ಅಪ್ಪ ಅವರಿಗೆ ಕಥೆ ಹೇಳ್ತಿದ್ದರು, ಸಿನಿಮಾ ಮಾಡ್ತಿದ್ದರು. ಈಗ ನಂಗೆ ಕಥೆ ಹೇಳಿದ್ದಾರೆ, ನಂಗೊಂದು ಸೀರಿಯಲ್ ಮಾಡ್ತಿದ್ದಾರೆ ಎಂದು ಸಂಸತ ಹಂಚಿಕೊಂಡರು.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರಾದ ಶಿವಕುಮಾರ್ ಕೂಡ ನನಗೆ ಭರವಸೆ ತುಂಬಿದ್ದರು. ಆತಂಕಕ್ಕೆ ಒಳಗಾಗಬೇಡಿ. ಸೀರಿಯಲ್ ಸಿಕ್ಕೇ ಸಿಗುತ್ತೆ ಎಂದಿದ್ದರು. ಕೊನೆಗೆ ವಿವಾದ ಆಗಿ ಮೂರೇ ದಿನಕ್ಕೆ ಅವಕಾಶ ಸಿಕ್ತು. ಉದಯ್ ಟಿವಿಯಲ್ಲಿ ಸೂರ್ಯವಂಶ ಸೀರಿಯಲ್ ಬರುವ ಬಗ್ಗೆ ಶಿವಕುಮಾರ್ ಅವರೇ ಮಾಹಿತಿ ನೀಡಿದ್ದರು. ಕೊನೆಗೆ ಉದಯ ಸಂಸ್ಥೆಯವರೇ ಕರೆ ಮಾಡಿ ಸುದ್ದಿ ತಿಳಿಸಿದ್ದರು. ಇವತ್ತು(ಡಿ.9) ನಾನು ಸಭೆಗೆ ತುಂಬಾ ನಿರೀಕ್ಷೆ ಇಟ್ಕೊಂಡು ಬಂದೆ. ಆದರೆ, ಕಿರುತೆರೆ ನಿರ್ಮಾಪಕರೇ ಬಂದಿಲ್ಲ ಎಂದು ಅನಿರುದ್ಧ್ ಹೇಳಿದರು.
ನಾನು ಪತ್ರಿಕೆಗಳಿಗೆ ಸಾಕಷ್ಟು ಲೇಖನ ಬರೆದಿದ್ದೇನೆ. ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದೇನೆ. ವಸುಧೈವ ಕುಟುಂಬಕಂ ಅನ್ನೋ ಪದ ಬಳಸಿದ್ದೇನೆ. ಜೊತೆಜೊತೆಯಲಿ ಕುಟುಂಬ ನನ್ನ ಕುಟುಂಬ. ತುಂಬಾ ಸಲ ಈ ಮಾತು ಹೇಳಿದ್ದೇನೆ. ಈಗಲೂ ಇದನ್ನೇ ಹೇಳುತ್ತಿರುವೆ. 3 ವರ್ಷ 2 ತಿಂಗಳು ಆ ಸೀರಿಯಲ್ ಜೊತೆ ಕೆಲಸ ಮಾಡಿದ್ದೇನೆ. ಆದರೆ ಸಣ್ಣ ಮನಸ್ತಾಪಕ್ಕೆ ಇಷ್ಟೆಲ್ಲಾ ಮಾಡಿದರು. ಏಕ್ದಮ್ ಡಿವೋರ್ಸ್ ನಿರ್ಧಾರಕ್ಕೆ ಬಂದರು. ಮನಸ್ತಾಪ ಮೂಡಿದ್ದರೂ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. 'ಮಾಧ್ಯಮದವರು ಪ್ರತಿಕ್ರಿಯೆ ಕೇಳ್ತಿದ್ದಾರೆ, ಏನ್ ಹೇಳಬೇಕು?' ಅಂತ ನಾನು ಅವರಿಗೇ ಕೇಳಿದ್ದೇನೆ. ಯಾಕಂದ್ರೆ ಜೊತೆಜೊತೆಯಲಿ ಕುಟುಂಬ ನನ್ನ ಕುಟುಂಬ ಆಗಿದ್ದರಿಂದ ಬೀದೀಲಿ ಮರ್ಯಾದೆ ತೆಗೆಯಲಿಕ್ಕೆ ಇಷ್ಟ ಇರಲಿಲ್ಲ. ಆದರೆ ಅವರು ನನ್ನ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ. ಆರೂರು ಜಗದೀಶ್ ಮಾತಾಡ್ತಾ 'ನಂಗೆ ಒತ್ತಡ ಇದೆ' ಅನ್ನೋ ಪದ ಬಳಸಿದ್ದಾರೆ. ಆದರೆ, ಅವರಿಗೆ ಒತ್ತಡ ಹಾಕಿದ್ದು ಯಾರು? ಅಷ್ಟಕ್ಕೂ ಅವರಿಗೆ ಯಾವ ಒತ್ತಡ ಇತ್ತು ಗೊತ್ತಿಲ್ಲ. ಅವರು ಒಮ್ಮೆ ನನಗೆ ಕಾಲ್ ಮಾಡಿ ಕರೆದಿದ್ದರೆ ನಾನು ಹೋಗ್ತಿದ್ದೆ. ಆದರೆ, ಅವರು ನನ್ನನ್ನು ಕರೆಯಲಿಲ್ಲ. ಬರೀ ಆರೋಪಗಳನ್ನ ಮಾಡಿದರು. ಕೊನೆಗೆ ನಾನು ಮಕ್ಕಳ ಮೇಲೆ ಆಣೆ ಮಾಡಿ ಎಂದಾಗ ಸುಮ್ಮನಾದರು, ಆಣೆ ಮಾಡಲಿಲ್ಲ, ಇಲ್ಲಿ ತಮ್ಮತನಕ್ಕಿಂತ ಪಾತ್ರ ಮುಖ್ಯ ಆಗುತ್ತೆ. ಹೀಗಾಗಿ ಕಾಲ್ ಮಾಡ್ಲಿ ಅಂತ ಕಾದೆ, ಅವರು ಕಾಲ್ ಮಾಡದೇ ಕೈಬಿಟ್ಟುಬಿಟ್ಟರು ಎಂದರು ಅನಿರುದ್ಧ್ ವಿವರಿಸಿದರು.
ನನ್ನನ್ನು ಅಶಿಸ್ತಿನ ನಟ ಅನ್ನೋ ಆರೋಪ ಮಾಡ್ತಿದ್ದಾರೆ. ಆ ಆರೋಪಕ್ಕೆ ಈಗ ಉತ್ತರ ಕೊಡ್ತೀನಿ ಕೇಳಿ. ನಾನು 9 ಗಂಟೆ ಅಂದರೆ 9 ಗಂಟೆಗೆ ಸ್ಪಾಟ್ನಲ್ಲಿ ಇರ್ತೀನಿ. ಕ್ಯಾರವಾನ್ ಕೊಡಲಿಲ್ಲ.. ಅದನ್ನ ನಾನು ಪ್ರಶ್ನೆ ಮಾಡಿದ್ದು ನಿಜ. ಯಾಕಂದ್ರೆ ನಾವು ಗಂಡುಮಕ್ಕಳು ಎಲ್ಲಾದರೂ ಬಟ್ಟೆ ಬದಲಾಯಿಸ್ಬೋದು. ಆದರೆ, ಸೀರಿಯಲ್ ಹೆಣ್ಣುಮಕ್ಕಳು ಕ್ಯಾರವಾನ್ ಇಲ್ಲದೆ ಹೇಗೆ ಬಟ್ಟೆ ಬದಲಾಯಿಸ್ತಾರೆ? ಇದನ್ನು ಪ್ರಶ್ನಿಸಿದ್ರೆ ನಾನು ಅಶಿಸ್ತಿನ ವ್ಯಕ್ತಿ, ನಾನು ದುರಂಹಕಾರಿ ಅಂತಾರೆ. ನನಗೆ ಅಂತಹ ವ್ಯಕ್ತಿತ್ವ ಇಲ್ಲ, ನಾನು ದುರಹಂಕಾರಿ ಅಲ್ಲ ಎಂದರು.