

ಬೀಜಿಂಗ್ : ಕರೊನಾ ಲಸಿಕೆ ಪಡೆದ ಮೇಲೆ ಆರಾಮವಾಗಿ ಸುತ್ತಾಡಬಹುದೆಂಬ ಆಶಯ ಹಲವರದ್ದು. ಹೀಗಿರುವಾಗ ಲಸಿಕೆ ಪಡೆದ ಮೇಲೆ ಶಾಪಿಂಗ್ ಹೋದಾಗ ಒಳ್ಳೇ ರಿಯಾಯತಿಗಳೂ ಸಿಕ್ಕರೆ ಬಂಪರ್ ಬಹುಮಾನ ಸಿಕ್ಕಂತೆ. ಇಂಥದ್ದೊಂದು ಯೋಜನೆಯನ್ನು ಬೀಜಿಂಗ್ನ ಡಾಕ್ಸಿಂಗ್ ಜಿಲ್ಲಾ ಆಡಳಿತ ಜಾರಿಗೆ ತಂದಿದೆ.
ಹೌದು, ಚೀನಾದ ಈ ಊರಿನಲ್ಲಿ ಕರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಜನರಿಗೆ ವಿಶೇಷ ಡಿಸ್ಕೌಂಟ್ ಒದಗಿಸುವ ಶಾಪಿಂಗ್ ಕೂಪನ್ಗಳನ್ನು ನೀಡಲಾಗುತ್ತಿದೆ! ಈ ಮೂಲಕ ಹೆಚ್ಚು ಹೆಚ್ಚು ಜನರು ಕರೊನಾ ಲಸಿಕೆಯನ್ನು ಶೀಘ್ರವಾಗಿ ಪಡೆಯಲು ಪ್ರೇರೇಪಿಸಲಾಗುತ್ತಿದೆ.
ಸುಮಾರು 1.8 ಮಿಲಿಯನ್ ಜನಸಂಖ್ಯೆ ಹೊಂದಿರುವ ಡಾಕ್ಸಿಂಗ್ ಜಿಲ್ಲೆಯಲ್ಲಿ ನೀಡಲಾಗುತ್ತಿರುವ ಈ ಕೂಪನ್ಗಳನ್ನು ಸೂಪರ್ಮಾರ್ಕೆಟ್ಗಳಲ್ಲಿ ಬಳಸಬಹುದಂತೆ. ಈವರೆಗೆ ಡಾಕ್ಸಿಂಗ್ನ ಶೇ. 73 ರಷ್ಟು 18 ವರ್ಷ ಮೇಲ್ಪಟ್ಟ ಜನರು ಕರೊನಾ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದು, ಈ ಪ್ರಮಾಣವನ್ನು ಮತ್ತೂ ಹೆಚ್ಚಿಸಬೇಕೆಂಬುದು ಆಡಳಿತದ ಅಪೇಕ್ಷೆಯಾಗಿದೆ.
ಲಸಿಕೆ ಪಡೆದವರಿಗೆ 8 ಯುವಾನ್(90 ರೂ.)ನಿಂದ ಹಿಡಿದು 30 ಯುವಾನ್ (330 ರೂ.) ಮೌಲ್ಯದವರೆಗೆ ವಿವಿಧ ಷರತ್ತುಗಳ ಮೇಲೆ ಕೂಪನ್ ನೀಡಲಾಗುವುದು. ಒಟ್ಟು 200 ಮಿಲಿಯನ್ ಯುವಾನ್ (ಸುಮಾರು 222 ಕೋಟಿ ರೂ.) ಮೌಲ್ಯದ ರಿಯಾಯಿತಿ ಕೂಪನ್ಗಳನ್ನು ತಯಾರಿಸಲಾಗಿದೆ ಎಂದು ಜಿಲ್ಲಾಡಳಿತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. (ಏಜೆನ್ಸೀಸ್)