

ಮುಂಬೈ : ಕರೊನಾ ಸೋಂಕು ಹೆಚ್ಚುತ್ತಿದ್ದರೂ ಸುಖಾಸುಮ್ಮನೇ ಶಾಪಿಂಗ್ಗೆಂದು ಮಾಲ್ ಕಡೆ ಹೆಜ್ಜೆ ಹಾಕುವ ಜನರು ಇನ್ನು ಮುಂದೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಏಕೆಂದರೆ ಮುಂಬೈ ನಗರದಲ್ಲಿ ಮಾಲ್ಗಳನ್ನು ಪ್ರವೇಶಿಸುವ ಜನರಿಗೆ ಕರೊನಾ ಪರೀಕ್ಷೆ ನಡೆಸಲು ನಗರ ಪಾಲಿಕೆಯ ಸಿಬ್ಬಂದಿ ಕಾದು ಕೂರಲಿದ್ದಾರೆ. ಅಷ್ಟೇ ಅಲ್ಲ, ಆ ಪರೀಕ್ಷೆಯ ವೆಚ್ಚವನ್ನು ಸಹ ಅಂತಹ ಜನರಿಂದಲೇ ಪಡೆಯಲಿದ್ದಾರೆ.
ಜನರು ಓಡಾಡುವುದನ್ನು ಕಡಿಮೆ ಮಾಡಲು ಮತ್ತು ಸೋಂಕು ಪತ್ತೆ ಕಾರ್ಯವನ್ನು ತ್ವರಿತಗೊಳಿಸಲು ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಜನನಿಬಿಡ ಪ್ರದೇಶಗಳಲ್ಲಿ ರಾಂಡಮ್ ಆಗಿ ಕರೊನಾ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ರೈಲು ನಿಲ್ದಾಣ, ಬಸ್ ಡಿಪೋ, ಗಲ್ಲಿ ಮಾರ್ಕೆಟ್, ಮಾಲ್ ಮುಂತಾದೆಡೆ ಯಾವುದೇ ವ್ಯಕ್ತಿಯನ್ನು ನಿಲ್ಲಿಸಿ ಕರೊನಾ ಪರೀಕ್ಷೆಗೊಳಪಡಿಸುವ ಅಧಿಕಾರವನ್ನು ಪಾಲಿಕೆ ಸಿಬ್ಬಂದಿಗೆ ನೀಡಲಾಗಿದೆ. ರಾಪಿಡ್ ಆ್ಯಂಟಿಜನ್ ಟೆಸ್ಟಿಂಗ್ ಮೂಲಕ ನಡೆಸಲಾಗುವ ಈ ಪರೀಕ್ಷೆಗೆ ಜನರ ಅನುಮತಿ ಬೇಕಿಲ್ಲ. ಬಿಎಂಸಿ ಸಿಬ್ಬಂದಿ ಪರೀಕ್ಷೆ ಮಾಡಿಸಲು ಆಯ್ಕೆ ಮಾಡಿದಲ್ಲಿ, ಅದು ಕಡ್ಡಾಯವಾಗಿರುತ್ತದೆ.
ವಿಶೇಷವೆಂದರೆ, ಬೇರೆಲ್ಲಾ ಸ್ಥಳಗಳಲ್ಲಿ ಬಿಎಂಸಿ ನಡೆಸುವ ಈ ರಾಂಡಮ್ ಪರೀಕ್ಷೆ ಉಚಿತವಾಗಿ ನಡೆಯಲಿದೆ. ಆದರೆ, ಮಾಲ್ಗಳಲ್ಲಿ ಮಾತ್ರ ಪರೀಕ್ಷೆಯ ವೆಚ್ಚವನ್ನು ಜನರೇ ಭರಿಸಬೇಕಾಗಿದೆ. ಮಾಲ್ ಪ್ರವೇಶಿಸಿದ ಮೇಲೆ ಪಾಲಿಕೆ ಸಿಬ್ಬಂದಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದಲ್ಲಿ, ದುಡ್ಡು ಕೊಟ್ಟು ಕಡ್ಡಾಯವಾಗಿ ಪರೀಕ್ಷೆಗೊಳಪಡಬೇಕು. ಹೀಗಾಗಿ ಮಾಲ್ಗೆ ಹೆಜ್ಜೆಯಿಡುವ ಮುನ್ನ ಜನರು ಚೆನ್ನಾಗಿ ಯೋಚಿಸುವುದಲ್ಲದೆ ತಮ್ಮ ಜೇಬನ್ನೂ ಮತ್ತಷ್ಟು ತುಂಬಿಸಿಕೊಂಡು ಹೋಗಬೇಕಾದೀತು.
ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುವುದು ಇಲ್ಲವೇ ಹಣ ಭರಿಸದಿರುವುದಕ್ಕೂ ಅವಕಾಶವಿಲ್ಲ. ಏಕೆಂದರೆ ಅದು ಸಾಂಕ್ರಾಮಿಕ ಕಾಯ್ದೆ, 1897 ರ ಅಡಿಯಲ್ಲಿ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಬಿಎಂಸಿ ಕಾನೂನು ಕ್ರಮ ಕೈಗೊಳ್ಳಬಹುದು. ಈ ರೀತಿಯಾಗಿ ಮುಂಬೈನ 27 ಮಾಲ್ಗಳಲ್ಲಿ ಒಟ್ಟು 10,800 ಪರೀಕ್ಷೆಗಳನ್ನು ಪ್ರತಿದಿನ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಮಾಲ್ನಲ್ಲಿ 400 ಜನರ ಮೇಲೆ ಕಡ್ಡಾಯ ಕರೊನಾ ಪರೀಕ್ಷೆ ನಡೆಸುವ ಟಾರ್ಗೆಟ್ಅನ್ನು ಬಿಎಂಸಿ ಸಿಬ್ಬಂದಿಗೆ ನೀಡಲಾಗಿದೆ. (ಏಜೆನ್ಸೀಸ್)