ನನ್ನ ಮಗನನ್ನು ರಾಯ್​ಬರೇಲಿ ಜನರಿಗೆ ಒಪ್ಪಿಸುತ್ತಿದ್ದೇನೆ: ರಾಹುಲ್ ಪರ ಸೋನಿಯಾ ಗಾಂಧಿ ಪ್ರಚಾರ

rahul Gandhi
Published on

ರಾಯ್‌ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿಯ ಜನರಿಗೆ ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಹೇಳಿದರು.

ರಾಯ್​ ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಿದ ಸೋನಿಯಾ ಗಾಂಧಿ ಅವರು, 20 ವರ್ಷಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೆ ರಾಯ್ ಬರೇಲಿ ನನ್ನ ಜೀವನದ ಅತಿ ದೊಡ್ಡ ಆಸ್ತಿ ಎಂದು ಹೇಳಿದರು.

ಈ ವರ್ಷದ ಆರಂಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ತಾಯಿ ಸೋನಿಯಾ ಗಾಂಧಿ (77) ಅವರು ಪ್ರತಿನಿಧಿಸುವ ಕ್ಷೇತ್ರವಾದ ರಾಯ್​ ಬರೇಲಿಯ ಕುಟುಂಬದ ಭದ್ರಕೋಟೆಯಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. "ಮೇನ್ ಆಪ್ಕೋ ಅಪ್ನಾ ಬೀಟಾ ಸೌಪ್ ರಹೀ ಹೂಂ (ನಾನು ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ)" ಎಂದು ಸೋನಿಯಾ ಗಾಂಧಿ ಹೇಳಿದಾಗ ಸಭೆಯಲ್ಲಿದ್ದ ಜನರು ಚಪ್ಪಾಳೆಯೊಂದಿಗೆ ರಾಹುಲ್ ಗಾಂಧಿಯನ್ನು ಸ್ವಾಗತಿಸಿದ್ದಾರೆ.

ಜೈಸಾ ಆಪ್ನೆ ಮುಝೆ ಅಪ್ನಾ ಮಾನಾ, ವೈಸೇ ಹಾಯ್ ರಾಹುಲ್ ಲೋ ಅಪ್ನಾ ಮಾನ್ ಕರ್ ರಖನಾ ಹೈ. ಯೇ ರಾಹುಲ್ ಆಪ್ ಕೊ ನಿರಾಶ್ ನಹೀ ಕರೇಂಗೆ (ನೀವು ನನ್ನನ್ನು ನಿಮ್ಮಮವರಾಗಿ ನಡೆಸಿಕೊಂಡ ರೀತಿ, ಈಗ ರಾಹುಲ್ ಗಾಂಧಿ ಅವರನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳಿ. ಅವರು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ) ಎಂದು ಅವರು ಒತ್ತಿ ಹೇಳಿದರು.

ಇಂದಿರಾ ಗಾಂಧಿ ಮತ್ತು ರಾಯಬರೇಲಿಯ ಜನರು ನನಗೆ ಕಲಿಸಿದ ಪಾಠಗಳನ್ನು ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದೆ. ಎಲ್ಲರನ್ನೂ ಗೌರವಿಸುವುದು, ದುರ್ಬಲರನ್ನು ರಕ್ಷಿಸುವುದು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡುವುದನ್ನು ಕಲಿಸಿದೆ. ಭಯಪಡಬೇಡಿ, ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ಬಹಳ ಆಳವಾದವು” ಎಂದು 2004 ರಲ್ಲಿ ರಾಯ್‌ಬರೇಲಿಯಿಂದ ಸಂಸದರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಹೇಳಿದರು. ತನ್ನನ್ನು ಆಯ್ಕೆ ಮಾಡಿದ ರಾಯ್ಬರೇಲಿಯ ಜನತೆಗೆ ಸೋನಿಯಾ ಗಾಂಧಿ ಕೂಡ ಧನ್ಯವಾದ ಹೇಳಿದ್ದಾರೆ.

53 ವರ್ಷದ ರಾಹುಲ್​ ಗಾಂಧಿ ಅವರು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net