

ನವದೆಹಲಿ: ಇಸ್ರೇಲ್ನಲ್ಲಿ ಹಮಾಸ್ ಉಗ್ರರ ದಾಳಿಯಿಂದ ಸೃಷ್ಟಿಯಾಗಿರುವ ರಣಾಂಗಣ ಹಾಗೂ ರಣಭೀಕರ ಪರಿಸ್ಥಿತಿ ಇನ್ನೂ ಪೂರ್ತಿಯಾಗಿ ಶಮನಗೊಂಡಿಲ್ಲ. ಅಂದಿನ ಹತ್ಯಾಕಾಂಡದ ಘಟನೆ ನಡೆದ ಮೂರು ವಾರಗಳ ಬಳಿಕ ಅದರ ಚಿತ್ರಣ ಇವರು ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ.
ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹತ್ಯಾಕಾಂಡಗಳ ನಕ್ಷೆ ಎಂಬ ಶೀರ್ಷಿಕೆಯಲ್ಲಿ ಈ 'ರಕ್ತಸಿಕ್ತ' ಚಿತ್ರಣವನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 7ರ ಹತ್ಯಾಕಾಂಡದಲ್ಲಿ ಏನೇನಾಯ್ತು, ಎಲ್ಲಿ ಎಷ್ಟು ಮಂದಿಯನ್ನು ಹತ್ಯೆ ಮಾಡಲಾಯಿತು ಎಂಬ ವಿವರವನ್ನು ಈ ನಕ್ಷೆ ಮೂಲಕ ತಿಳಿಸಲಾಗಿದೆ.
ಈ ಹತ್ಯಾಕಾಂಡದಲ್ಲಿ ಹಿಂಸೆ, ಹಲ್ಲೆ, ಅತ್ಯಾಚಾರ ಸೇರಿ 1,400ಕ್ಕೂ ಅಧಿಕ ಕೊಲೆ, 239 ಅಪಹರಣ ನಡೆದಿದ್ದು, 40 ಮಂದಿ ನಾಪತ್ತೆ ಆಗಿದ್ದಾರೆ. ಅಲ್ಲದೆ 4834ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ ಎಂಬ ಮಾಹಿತಿಯೊಂದಿಗೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಈ ಹತ್ಯಾಕಾಂಡದ ನಕ್ಷೆಯನ್ನು ಹಂಚಿಕೊಂಡಿದೆ. ಅದರಲ್ಲಿ ಹಮಾಸ್ ಉಗ್ರರ ಕ್ರೌರ್ಯದ ಜಾಡನ್ನು ಕೆಂಪು ಚುಕ್ಕೆಗಳೊಂದಿಗೆ ಗುರುತಿಸಲಾಗಿದೆ.