

ನವದೆಹಲಿ: ಇಸ್ರೇಲ್ನಲ್ಲಿ ಹಮಾಸ್ ಉಗ್ರರ ದಾಳಿಯಿಂದಾಗಿ ರಣಭೀಕರ ಯುದ್ಧ ಪರಿಸ್ಥಿತಿ ಸೃಷ್ಟಿಯಾದ ಬಳಿಕ ಅಲ್ಲಿ ಉಗ್ರರು ಸುರಂಗಗಳನ್ನೂ ಕೊರೆದಿದ್ದರು ಎಂಬ ಮಾಹಿತಿ ಹರಿದಾಡಿತ್ತು. ಇದೀಗ ಅದಕ್ಕೆ ಪೂರಕ ಎಂಬಂತೆ ಇನ್ನೊಂದಷ್ಟು ಮಾಹಿತಿ ಬಹಿರಂಗಗೊಂಡಿದೆ.
ಇರಾನಿ ಸೇನೆಯ ಚೀಫ್ ಆಫ್ ಸ್ಟಾಫ್, ಮೇಜರ್ ಜನರಲ್ ಮೊಹಮ್ಮದ್ ಬಘೇರಿ ಅವರು ಟೆಹ್ರಾನ್ನಲ್ಲಿ ನಡೆದ ಸಿವಿಲ್ ಡಿಫೆನ್ಸ್ ಕಾನ್ಫೆರೆನ್ಸ್ನಲ್ಲಿ ಈ ಸಂಗತಿ ಬಹಿರಂಗಪಡಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ 248 ಮೈಲಿ ಅಂದರೆ 400 ಕಿಲೋಮೀಟರ್ಗೂ ಅಧಿಕ ಉದ್ದದ ಸುರಂಗ ಕೊರೆಯಲಾಗಿದೆ, ಕೆಲವೆಡೆ ಅವುಗಳ ಮೂಲಕ ಬೈಕ್ ಮತ್ತು ಇತರ ವಾಹನಗಳು ಸಂಚರಿಸಬಹುದಾಗಿದೆ. ಅದರಲ್ಲೂ ಕೆಲವು ಸುರಂಗಗಳು ಇಸ್ರೇಲ್ಗೇ ಪ್ರವೇಶ ಪಡೆದುಕೊಂಡಿವೆ ಎಂದೂ ಅವರು ಹೇಳಿದ್ದಾರೆ.