

ಹೈದರಾಬಾದ್: 2018ರಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಭೀಕರ ಮರ್ಯಾದಾ ಹತ್ಯೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಇಂದು ಪ್ರಮುಖ ಆರೋಪಿ ಮಾರುತಿ ರಾವ್ ಮೃತದೇಹ ಖೈರತಾಬಾದ್ನ ಆರ್ಯ ವೈಶ್ಯ ಭವನದ ಕೊಠಡಿ ಸಂಖ್ಯೆ306ರಲ್ಲಿ ಪತ್ತೆಯಾಗಿದೆ.
ಮಗಳು ಅಮೃತಾಳನ್ನು ಮದುವೆಯಾಗಿದ್ದ ಪ್ರಣಯ್ನನ್ನು ಆತ ದಲಿತ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಮಾರುತಿ ರಾವ್ 1 ಕೋಟಿ ರೂಪಾಯಿ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿತ್ತು. ಆಗ ಅಂದರೆ 2018ರ ಸೆಪ್ಟೆಂಬರ್ನಲ್ಲಿ ಗರ್ಭಿಣಿಯಾಗಿದ್ದ ಅಮೃತಾಳ ಎದುರೇ ಆಕೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಪ್ರಣಯ್ನನ್ನು ಬರ್ಬರವಾಗಿ ಕೊಲ್ಲಲಾಗಿತ್ತು.
ಈ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೆನಿಸಿಕೊಂಡಿದ್ದ ಮಾರುತಿ ರಾವ್ ಮೃತದೇಹ ಪತ್ತೆಯಾದ ಬೆನ್ನಲ್ಲೇ ಆತನ ಮಗಳು, ಮೃತ ಪ್ರಣಯ್ ಪತ್ನಿ ಅಮೃತಾ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಪ್ರಣಯ್ ಹತ್ಯೆ ಆದಾಗಿನಿಂದಲೂ ನಾನು ನನ್ನ ತಂದೆಯೊಂದಿಗೆ ಮಾತನಾಡಿಲ್ಲ. ಅವರ ಸಂಪರ್ಕವನ್ನೇ ಕಡಿದುಕೊಂಡಿದ್ದೆ ಎಂಬ ವಿಷಯವನ್ನು ತಿಳಿಸಿದ್ದಾರೆ.
ಮಾರುತಿ ರಾವ್ ಮೃತದೇಹ ಪತ್ತೆಯಾದ ಬಗ್ಗೆ ನನಗೂ ಸರಿಯಾದ ಮಾಹಿತಿ ಗೊತ್ತಿಲ್ಲ. ಏನಾಗಿರಬಹುದು ಎಂಬ ಅನುಮಾನ ನಮಗೂ ಕಾಡುತ್ತಿದೆ. ಮಾಧ್ಯಮಗಳ ಮೂಲಕವಷ್ಟೇ ಆತನ ಸಾವಿನ ಸುದ್ದಿ ನಮಗೆ ತಿಳಿಯಿತು. ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ ನಾವು ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಪ್ರಣಯ್ ಹತ್ಯೆಯಾದ ಬಳಿಕ ಅಮೃತಾ, ಯಾವ ಕಾರಣಕ್ಕೂ ತವರು ಮನೆಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ಪ್ರಣಯ್ ಕುಟುಂಬದ ಜತೆಗೇ ಇದ್ದರು. 2019ರ ಜನವರಿಯಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 2019ರ ಜೂನ್ನಲ್ಲಿ ಪೊಲೀಸರು ಮಾರುತಿ ರಾವ್ ಸೇರಿ ಒಟ್ಟು ಏಳು ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಸದ್ಯ ಮಾರುತಿ ರಾವ್ ಮೃತದೇಹ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)