

ಹೈದರಾಬಾದ್: 2018ರಲ್ಲಿ ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ ಮಾರುತಿ ರಾವ್ ಮೃತದೇಹ ಹೈದರಾಬಾದ್ನಲ್ಲಿ ಪತ್ತೆಯಾಗಿದ್ದು, ಖೈರತಾಬಾದ್ನ ಆರ್ಯ ವೈಶ್ಯ ಭವನ್ನ 306 ಕೊಠಡಿ ಸಂಖ್ಯೆಯಲ್ಲಿ ಮೃತದೇಹ ಸಿಕ್ಕಿದೆ.
ಪ್ರಕರಣ ಬಗ್ಗೆ ಮಾತನಾಡಿರುವ ಸೈಫಾಬಾದ್ ಸಹಾಯಕ ಪೊಲೀಸ್ ಆಯುಕ್ತ ವೇಣು ಗೋಪಾಲ್ ರೆಡ್ಡಿ, ದೇಹವನ್ನಷ್ಟೇ ಗುರುತಿಸಲಾಗಿದೆ. ಇತರೆ ಮಾಹಿತಿ ಇನ್ನೂ ತಿಳಿದಿಲ್ಲ. ಅವರೇಕೆ ಹೈದರಾಬಾದ್ಗೆ ಬಂದರು ಎಂಬುದು ಗೊತ್ತಿಲ್ಲ. ದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂದಹಾಗೆ ಮಾರುತಿ ರಾವ್ ವಿರುದ್ಧ 1 ಕೋಟಿ ರೂ. ಸುಫಾರಿ ನೀಡಿ ತನ್ನ ಮಗಳನ್ನು ಮದುವೆಯಾಗಿದ್ದ ಪ್ರಣಯ್ನನ್ನು 2018ರ ಸೆಪ್ಟೆಂಬರ್ನಲ್ಲಿ ಕೊಲೆ ಮಾಡಿಸಿದ ಆರೋಪ ಇದೆ.
ಪ್ರಣಯ್ ದಲಿತ ಸಮುದಾಯದವನಾಗಿದ್ದ, ಅಮೃತಾ ಪ್ರಭಾವಿ ವೈಶ್ಯ ಸಮುದಾಯವಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ಮಾರುತಿ ರಾವ್ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿದೆ.
ಸೆಪ್ಟೆಂಬರ್ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಬಳಿಕ ಪ್ರಕರಣದಲ್ಲಿ ಆರೋಪಿಗಳಾದ ಮಾರುತಿ ರಾವ್, ಸಹೋದರ ಸಾವನ್ ಸೇರಿ ಇತರರಿಗೆ ಬಂಧನವಾಗಿ 90 ದಿನಗಳಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ವಿಫಲವಾಗಿದ್ದರಿಂದ ಜಾಮೀನು ದೊರಕಿತ್ತು.
ಮಾರುತಿ ರಾವ್ಗೆ ಗೊತ್ತಿರುವವನು ಎನ್ನಲಾದ ವ್ಯಕ್ತಿಯೊಬ್ಬನ ಮೃತದೇಹ ಶೆಡ್ ಒಂದರಲ್ಲಿ ಪತ್ತೆಯಾದ ಒಂದು ದಿನದ ಬೆನ್ನಲ್ಲೇ ಮಾರುತಿ ರಾವ್ ದೇಹ ಸಿಕ್ಕಿದೆ. ಅಡಂಕಿ-ನರ್ಕತ್ಪಲ್ಲಿ ಹೆದ್ದಾರಿಯಲ್ಲಿರುವ ಹನುಮಾನ್ಪೇಟೆ ಫ್ಲೈಓವರ್ ಬಳಿಯ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಬರುತ್ತಿರುವ ದುರ್ವಾಸನೆ ತಿಳಿದು ಪೊಲೀಸರನ್ನು ಎಚ್ಚರಿಸಿದ್ದರು. ಈ ಪ್ರಕರಣದ ತನಿಖೆಯು ನಡೆಯುತ್ತಿದ್ದು, ಪೊಲೀಸರು ಇನ್ನೂ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿಲ್ಲ. ಇದೀಗ ಮಾರುತಿ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)