

ತ್ರಿಶೂರ್: ಕೇರಳದ ತ್ರಿಶೂರ್ನಲ್ಲಿರು ಕುಟ್ಟುಮುಕ್ಕು ಮಹಾದೇವ ದೇವಸ್ಥಾನ ಒಂದೇ ದಿನದಲ್ಲಿ ಇಂಟರ್ನೆಟ್ನಲ್ಲಿ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಅದೂ ಟಾಯ್ಲೆಟ್ ವಿಚಾರದಲ್ಲಿ...!
ದೇಗುಲದ ಮುಖ್ಯ ಆವರಣದ ಒಂದು ಬದಿಯಲ್ಲಿ ಮೂರು ಶೌಚಗೃಹಗಳಿದ್ದು, ಅದರಲ್ಲಿ ಒಂದರ ಮೇಲೆ 'ಪುರುಷರಿಗೆ', ಮತ್ತೊಂದರ ಮೇಲೆ 'ಮಹಿಳೆಯರಿಗೆ' ಎಂದು ಬೋರ್ಡ್ ಹಾಕಲಾಗಿತ್ತು. ಆದರೆ ಮೂರನೇ ಟಾಯ್ಲೆಟ್ ಮೇಲೆ ಬ್ರಾಹ್ಮಣರಿಗೆ ಮಾತ್ರ' ಎಂದು ಬರೆದುಕೊಂಡಿದ್ದ ಫಲಕ ಇತ್ತು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೇಗುಲ ಆಡಳಿತ ಸ್ಪಷ್ಟನೆ ನೀಡಿದ್ದು, ಶೌಚಗೃಹಗಳು ದೇವಾಲಯದ ಆವರಣದಲ್ಲಿ ಇಲ್ಲ. ಸ್ವಲ್ಪ ಹೊರಭಾಗದಲ್ಲಿ ಇವೆ. ನಾವು ಬೋರ್ಡ್ಗಳನ್ನು ಇತ್ತೀಚೆಗೆ ಗಮನಿಸಿಯೇ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕವಷ್ಟೇ ನಮ್ಮ ಗಮನಕ್ಕೆ ಬಂದಿದೆ ಎಂದಿದೆ.
ದೇವಾಲಯ ಆಡಳಿತ ಸಮಿತಿ ಅಧಿಕಾರಿ ಕಣ್ಣನ್ ಎಂಬುವರು ಪ್ರತಿಕ್ರಿಯೆ ನೀಡಿದ್ದು, ದೇವಸ್ಥಾನದ ಮೂರು ಶೌಚಗೃಹಗಳ ಬಾಗಿಲುಗಳ ಮೇಲೆ ಈ ಫಲಕಗಳು ಎರಡು ದಶಕಗಳಿಂದಲೂ (20ವರ್ಷಗಳಿಂದ) ಇವೆ. ಆದರೆ ಇದುವರೆಗೂ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ದೂರು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಬ್ರಾಹ್ಮಣರಿಗೆ ಎಂದು ಬರೆದುಕೊಂಡಿದ್ದ ಶೌಚಗೃಹವನ್ನು ಇಷ್ಟು ವರ್ಷಗಳಿಂದಲೂ ದೇಗುಲದ ಅರ್ಚಕರು ಹಾಗೂ ಸಿಬ್ಬಂದಿ ಬಳಸುತ್ತಿದ್ದರು. ನಾವೂ ಸಹ ಬೋರ್ಡ್ನಲ್ಲಿ ಏನು ಬರೆದುಕೊಂಡಿದೆ ಎಂಬುದನ್ನು ಅಷ್ಟಾಗಿ ಗಮನಿಸಲು ಹೋಗಿರಲಿಲ್ಲ. ಮೊದಲಿನಿಂದಲೂ ಹಾಗೇ ಇತ್ತಾ? ಇತ್ತೀಚೆಗೆ ಬದಲಾಯಿತಾ ಎಂದೂ ಗೊತ್ತಿಲ್ಲ ಆದರೆ ಆ ಶೌಚಗೃಹವನ್ನು ದೇಗುಲದ ಸಿಬ್ಬಂದಿ ಹೊರತು ಇನ್ಯಾರೂ ಬಳಸುತ್ತಿರಲಿಲ್ಲ. ಫಲಕದ ಮೇಲೆ ಬ್ರಾಹ್ಮಣರಿಗೆ ಎಂದು ಬರೆದುಕೊಂಡಿದ್ದು ನಮ್ಮ ಗಮನಕ್ಕೆ ಬಂದ ತಕ್ಷಣ ಅದನ್ನು ಬದಲಿಸಿ, ಸ್ಟಾಫ್ ಓನ್ಲಿ (ದೇಗುಲ ಸಿಬ್ಬಂದಿಗೆ ಮಾತ್ರ) ಎಂಬ ಬೋರ್ಡ್ ಹಾಕಿದ್ದೇವೆ ಎಂದು ಕಣ್ಣನ್ ಮಾಹಿತಿ ನೀಡಿದ್ದಾರೆ.
ಈ ಫೋಟೋವನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಮೊದಲು ಪೋಸ್ಟ್ ಮಾಡಿದ್ದಾನೆ. ದೇವಾಲಯದ ಖ್ಯಾತಿಗೆ ಧಕ್ಕೆ ತಂದು, ಉತ್ಸವದ ಸಮಯ ಬಂದಿದ್ದರಿಂದ ಸಮಸ್ಯೆ ಸೃಷ್ಟಿಸಲು ಹೀಗೆ ಮಾಡಿದ್ದಿರಬಹುದು ಎಂಬ ಶಂಕೆಯೂ ಕಾಡುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)