ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

innerwear
Published on

ಅಹಮದಾಬಾದ್​: ಏನಾದರೂ ವಸ್ತುವನ್ನು ಉಚಿತವಾಗಿ ಕೊಡುತ್ತೇವೆಂದರೆ ಯಾರು ಬೇಡೆವೆನ್ನುತ್ತಾರೆ ಹೇಳಿ? ಅದೇ ರೀತಿ ಉಚಿತವಾಗಿ ಒಳಬಟ್ಟೆಗಳನ್ನು (ಇನ್ನರ್​ವೇರ್​) ಕೊಡುತ್ತೇವೆ ಎಂದು ಬರುತ್ತಿದ್ದ ಜಾಹೀರಾತನ್ನು ನಂಬಿದ ಯುವತಿ ನಂತರ ಪೇಚಿಗೆ ಸಿಲುಕಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ಅಹಮದಾಬಾದ್​ನ ಯುವತಿಯ ಮೊಬೈಲ್​ಗೆ ಡಿಸೆಂಬರ್​ 3ರಂದು ಒಂದು ಜಾಹೀರಾತಿನ ಸಂದೇಶ ಬಂದಿತ್ತಂತೆ. ನೀವು ಈ ಲಿಂಕ್​ನಲ್ಲಿ ನೋಂದಣಿಯಾದರೆ ನಿಮಗೆ ಉಚಿತವಾಗಿ ಇನ್ನರ್​ವೇರ್​ಗಳನ್ನು ಕಳುಹಿಸಿಕೊಡಲಾಗುತ್ತದೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಅದರ ಆಸೆಗೆ ಬಿದ್ದ ಯುವತಿ ಲಿಂಕ್​ ತೆರೆದು, ಮೊಬೈಲ್ ಸಂಖ್ಯೆ ಕೊಟ್ಟು ನೋಂದಣಿ ಮಾಡಿಕೊಂಡಿದ್ದಾಳೆ. ಅದಾದ ಕೆಲ ದಿನಗಳ ನಂತರ ಆಕೆಗೆ ಯಾವುದೋ ಒಂದು ನಂಬರ್​ ಇಂದ ಮೆಸೇಜ್​ ಬಂದಿದೆ. ನೀವು ನಿಮ್ಮ ಫೋಟೋವನ್ನು ಕಳುಹಿಸಿದರೆ ನಿಮಗೆ ಉಚಿತ ಇನ್ನರ್​ವೇರ್​ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ. ಅದರಂತೆ ಆಕೆ ಫೋಟೋ ಕಳುಹಿಸಿದ್ದಾಳೆ ಕೂಡ.

ಈ ಎಲ್ಲ ಘಟನೆಯಾಗಿ ಒಂದು ವಾರವಾದ ಮೇಲೆ ಮತ್ತೊಂದು ಸಂದೇಶ ಬಂದಿದೆ. ನಿಮ್ಮ ನಗ್ನ ಫೋಟೋಗಳನ್ನು ಕಳುಹಿಸಿಕೊಡಿ. ನಂತರ ನಿಮಗೆ ಉಚಿತ ಇನ್ನರ್​​ವೇರ್​ ಕಳುಹಿಸಿಕೊಡಲಾಗುವುದು ಎಂದು ಮೆಸೇಜ್​ ಮಾಡಲಾಗಿದೆ. ಈ ಸಂದೇಶವನ್ನು ಕಂಡು ಶಾಕ್​ ಆದ ಯುವತಿ ಅದು ಸಾಧ್ಯವಿಲ್ಲ ಎಂದು ವಾಪಾಸು ಮೆಸೇಜ್​ ಮಾಡಿದ್ದಾಳೆ. ನಂತರ ಅತ್ಯಂತ ಅಸಭ್ಯವಾಗಿ ಆ ನಂಬರ್​ನಿಂದ ಮೆಸೇಜ್​ಗಳು ಬರಲಾರಂಭಿಸಿವೆ. ಇದರಿಂದ ಸಿಟ್ಟಿಗೆದ್ದ ಯುವತಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

ಉಚಿತ ಇನ್ನರ್​ವೇರ್​ ಕೊಡುವುದಾಗಿ ಹೇಳಿ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net