

ಜೋಧ್ಪುರ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ತನ್ನ ಭಾವಿ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ ನಂತರ ಮದುವೆ ಬೇಡ ಎಂದು ಸಂಬಂಧ ಮುರಿದಿರುವ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಯುವತಿ, ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಜೋಧ್ಪುರದ ಯುವತಿ ಮತ್ತು ಯುವಕನಿಗೆ ಕಳೆದ ವರ್ಷವೇ ನಿಶ್ಚಿತಾರ್ಥವಾಗಿತ್ತಂತೆ. ಆದರೆ ಲಾಕ್ಡೌನ್ ಕಾರಣದಿಂದಾಗಿ ಮದುವೆ ತಡವಾಗಿದೆ. ಈ ಮಧ್ಯೆ ಯುವಕ ನವೆಂಬರ್ 29ರಂದು ಯುವತಿಯನ್ನು ರೆಸಾರ್ಟ್ ಒಂದಕ್ಕೆ ಕರೆದಿದ್ದಾನೆ. ಅಲ್ಲಿ ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅದಾದ ನಂತರ ಯುವತಿಯಿಂದ ದೂರಾಗಲು ಆರಂಭಿಸಿದ್ದಾನೆ.
ಯುವತಿ ಮತ್ತು ಯುವಕನ ಕುಟುಂಬ ಕುಳಿತು ಚರ್ಚೆ ನಡೆಸಿದ್ದಾರೆ. ಆದರೆ ಮದುವೆಯಾಗುವುದಿಲ್ಲ ಎಂದು ಯುವಕ ಹಠ ಹಿಡಿದು ಕುಳಿತಿದ್ದಾನೆ. ಯುವತಿಯೊಂದಿಗಿದ್ದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿಕೊಂಡಿದ್ದಾನೆ. ಈ ನೋವು ತಾಳಲಾರದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಯುವಕ ನನಗೆ ಮೋಸ ಮಾಡಿದ್ದಾನೆ, ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)