ಅಭಿವೃದ್ಧಿ, ಸಂಘಟನೆಗೆ ಗ್ಯಾರಂಟಿ ಸವಾಲು; ಕೈ ರಕ್ಷಣಾತ್ಮಕ ಆಟ

Shivamogga
Published on

ಚಂದ್ರಶೇಖರ್ ಶೃಂಗೇರಿ ಶಿವಮೊಗ್ಗ
ಲೋಕಸಭಾ ಚುನಾವಣೆ ದಿನಾಂಕ ಘೊಷಣೆಗೆ ದಿನಗಣನೆ ಆರಂಭವಾಗಿದೆ. ಇದರ ನಡುವೆಯೇ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಹೆಸರು ಅಧಿಕೃತವಾಗಿಯೇ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳುವುದು ಬಾಕಿ ಉಳಿದಿದೆ. ಕ್ಷೇತ್ರದ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಕ್ಕಿರುವುದರಿಂದ ಚುನಾವಣಾ ರಂಗತಾಲೀಮು ಆರಂಭವಾಗಿದೆ.

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರ ಕಾಂಗ್ರೆಸ್​ಗೆ ‘ಕಬ್ಬಿಣದ ಕಡಲೆ’ ಎಂದರೆ ತಪ್ಪಲ್ಲ. ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯ, ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವರ್ಚಸ್ಸು, ತಳಮಟ್ಟದಲ್ಲಿನ ಪಕ್ಷದ ಕಾರ್ಯಕರ್ತರ ಪಡೆಯ ಬಲದಿಂದ ಕಳೆದೆರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ.

ಕ್ಷೇತ್ರದಲ್ಲಿ ಜರ್ಜರಿತವಾಗಿದ್ದ ಕಾಂಗ್ರೆಸ್ ತನ್ನ ‘ಕೋಟೆ- ಕೊತ್ತಲ’ಗಳನ್ನು ಭದ್ರಪಡಿಸಿಕೊಂಡು ‘ಮತಸಮರ’ಕ್ಕೆ ಸಿದ್ಧತೆ ನಡೆಸಿದೆ. ಬಿಜೆಪಿಯ ನಾಗಾಲೋಟಕ್ಕೆ ತಡೆಯೊಡ್ಡಲು ‘ಸೇನಾಪತಿ’ಗಳನ್ನು ಕಾಂಗ್ರೆಸ್ ಸಜ್ಜುಗೊಳಿಸಿದೆ. ಸಾಗರ, ಸೊರಬ ಹಾಗೂ ಭದ್ರಾವತಿ ಶಾಸಕ ಪಡೆಯನ್ನು ಬೆನ್ನಿಗೆ ಇಟ್ಟುಕೊಂಡಿರುವ ಕಾಂಗ್ರೆಸ್ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ನಾಲ್ವರು ಮುಖಂಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಜಾತಿ ಲೆಕ್ಕಾಚಾರದ ಮೇಲೆಯೇ ಅಧಿಕಾರ ಹಂಚಿಕೆ ಮಾಡಿರುವ ಕಾಂಗ್ರೆಸ್, ಈ ಮೂಲಕ ಚುನಾವಣೆಯಲ್ಲಿ ತನ್ನ ತಾಕತ್ತನ್ನು ಸಾಬೀತುಪಡಿಸಲು ಮುಂದಾಗಿದೆ.

ಭದ್ರಾವತಿ, ಸಾಗರ, ಸೊರಬ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್ 2019ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಹೆಚ್ಚು ಸುಸ್ಥಿತಿಯಲ್ಲಿದೆ. ಮಂತ್ರಿಮಂಡಳ ರಚನೆ ಸಂದರ್ಭದಲ್ಲಿ ಮುನಿಸಿಕೊಂಡಿದ್ದ ಜಿಲ್ಲೆಯ ಇಬ್ಬರು ಶಾಸಕರಾದ ಸಾಗರದ ಬೇಳೂರು ಗೋಪಾಲಕೃಷ್ಣ, ಭದ್ರಾವತಿಯ ಬಿ.ಕೆ.ಸಂಗಮೇಶ್ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಕಾಲದಲ್ಲಿ ಗೂಟದ ಕಾರಿನ ಭಾಗ್ಯ ಕರುಣಿಸಿ, ಕ್ಷೇತ್ರದಲ್ಲಿನ ಎರಡು ಪ್ರಮುಖ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಯತ್ನಿಸಿದೆ.

ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾದ ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಸೊರಬ ಶಾಸಕ ಮಧು ಬಂಗಾರಪ್ಪ ಸಚಿವರಾಗಿದ್ದರೆ, ಅದೇ ಸಮುದಾಯದ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಈಡಿಗ ಸಮುದಾದ ಇಬ್ಬರು ಮುಖಂಡರಿಗೂ ಸರ್ಕಾರದಲ್ಲಿ ಬಹುಮುಖ್ಯ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಹಾಗೆಯೇ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರಗೆ ಲ್ಯಾಂಡ್ ಆರ್ವಿು ಅಧ್ಯಕ್ಷ ಸ್ಥಾನ ನೀಡಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ. ಜಿಲ್ಲೆಯ ಇನ್ನೂ ಮೂವರು ಮುಖಂಡರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿ, ಜಾತಿ ಲೆಕ್ಕಾಚಾರವನ್ನು ಕಾಂಗ್ರೆಸ್ ಸರಿದೂಗಿಸಿದೆ. ಕ್ಷೇತ್ರದಲ್ಲಿ ಒಕ್ಕಲಿಗರು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಆ ಸಮುದಾಯದ ಆರ್.ಎಂ.ಮಂಜುನಾಥ ಗೌಡಗೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಎಚ್.ಎಸ್.ಸುಂದರೇಶ್​ಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಅಧ್ಯಕ್ಷ ಸ್ಥಾನ ದಯಪಾಲಿಸಲಾಗಿದೆ. ತೀರ್ಥಹಳ್ಳಿಯಲ್ಲಿ ತಮ್ಮ ಪಕ್ಷದ ಶಾಸಕರಿಲ್ಲದಿರುವ ಕಾರಣ ಮಂಜುನಾಥ ಗೌಡಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಜಾಣ ನಡೆ ಇಟ್ಟಿದೆ. ಸುಂದರೇಶ್​ಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಎಂಎಲ್​ಎ ಇಲ್ಲದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೂ ಅಧಿಕಾರ ಕೇಂದ್ರವನ್ನು ಸ್ಥಾಪಿಸಿದೆ. ಮೀಸಲು ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ-ಪಂಗಡದ ಮತದಾರರು ಇರುವುದರಿಂದ ಅಲ್ಲಿಯೂ ಕಾಂಗ್ರೆಸ್ ತನ್ನ ದಾಳ ಉರುಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಜಿ.ಪಲ್ಲವಿ ಅವರಿಗೆ ಸಾಂಬಾರ ಮಂಡಳಿ ಅಧ್ಯಕ್ಷ ಹುದ್ದೆ ನೀಡಿ ಉತ್ಸಾಹ ಹೆಚ್ಚಿಸಿದೆ.

ಅಷ್ಟ ದಿಕ್ಕುಗಳಲ್ಲೂ ಅಧಿಕಾರ ಕೇಂದ್ರ: ಅಷ್ಟ ದಿಕ್ಕುಗಳಲ್ಲಿಯೂ ಅಧಿಕಾರ ಕೇಂದ್ರ ಸ್ಥಾಪಿಸುವ ಮೂಲಕ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ‘ರಕ್ಷಣಾತ್ಮಕ’ ಆಟಕ್ಕೆ ಸಿದ್ಧತೆ ನಡೆಸಿ, ಜಾತಿ ಲೆಕ್ಕಾಚಾರದಂತೆ ಪ್ರಮುಖ ಸಮುದಾಯಕ್ಕೆ ಅಧಿಕಾರದ ಚುಕ್ಕಾಣಿ ನೀಡಿದೆ. ಶಿಕಾರಿಪುರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲೆಡೆ ಅಧಿಕಾರ ಕೇಂದ್ರಗಳನ್ನು ಸ್ಥಾಪಿಸಿ ಲೋಕಸಭೆ ಚುನಾವಣೆಯಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ನಡೆಸಲು ತನ್ನ ಪಡೆಯನ್ನು ಸನ್ನದ್ಧಗೊಳಿಸಿದೆ.

ಗ್ಯಾರಂಟಿಯೋ, ಸಂಘಟನೆಯೋ: ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೂಷಣೆಯಾಗದಿದ್ದರೂ ಕ್ಷೇತ್ರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಆರಂಭಿಸಿ ತಿಂಗಳೇ ಕಳೆದಿದೆ. ಚುನಾವಣೆ ದಿನಾಂಕ ಪ್ರಕಟಣೆಗೂ ಮುನ್ನವೇ ಭರ್ಜರಿ ತಾಲೀಮು ನಡೆಸಿರುವ ಬಿಜೆಪಿ ಜಾತಿ ಸಮಾವೇಶ, ಭಾರತ್ ರೈಸ್ ವಿತರಣೆ ಜತೆಗೆ ಸಂಘಟನಾತ್ಮಕವಾಗಿಯೂ ಬಿರುಸಿನ ಚಟುವಟಿಕೆ ನಡೆಸಿದೆ. ಪಕ್ಷದ ಸಂಘಟನಾತ್ಮಕ ಕೆಲಸಕ್ಕಿಂತ ‘ಗ್ಯಾರಂಟಿ’ಗಳನ್ನೇ ನಂಬಿಕೊಂಡಿರುವ ಕಾಂಗ್ರೆಸ್ ತಾಲೂಕು, ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದ ಮೂಲಕ ಚುನಾವಣೆಗೆ ಮುನ್ನುಡಿ ಬರೆದಿದೆ. ಒಂದೆಡೆ ಅಭ್ಯರ್ಥಿ ಘೊಷಣೆಯಾಗಿ ನಾಲ್ಕಾರು ದಿನ ಕಳೆದರೂ ಗೀತಾ ಶಿವರಾಜ್​ಕುಮಾರ್ ಇನ್ನೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಮತ್ತೊಂದೆಡೆ ಹಾಲಿ ಸಂಸದರೂ ಕ್ಷೇತ್ರ ಬಿಟ್ಟು ಹೊರಗೆ ಕಾಲಿಟ್ಟಿಲ್ಲ ಎನ್ನುವುದು ವಿಶೇಷ. ಮತದಾರ ‘ಗ್ಯಾರಂಟಿ’ಗೆ ಮಣೆ ಹಾಕುತ್ತಾನೋ, ‘ಸಂಘಟನೆ-ಅಭಿವೃದ್ಧಿ’ ಮಂತ್ರಕ್ಕೆ ಒಲಿಯುತ್ತಾನೋ ಎಂಬುದೇ ಯಕ್ಷಪ್ರಶ್ನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net